ಬೆಂಗಳೂರು: ಆದಾಯ ಮೀರಿ ಆಸ್ತಿ ಸಂಪಾದಿಸಿರುವ ಆರೋಪ ಎದುರಿಸುತ್ತಿರುವ ಸಿಬ್ಬಂದಿಗಳ ಆಸ್ತಿ ವಿವರ ನೀಡಲು ನಿರಾಕರಿಸುತ್ತಿರುವ ಇಲಾಖಾ ಮುಖ್ಯಸ್ಥರ ನಡೆಗೆ ಲೋಕಾಯುಕ್ತ ಗರಂ ಆಗಿದೆ.
ಹೀಗಾಗಿ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರಿಗೆ ಪತ್ರ ಬರೆದಿರುವ ಲೋಕಾಯುಕ್ತ ರಿಜಿಸ್ಟ್ರಾರ್ ಎಂ. ಚಂದ್ರಶೇಖರ್ ರೆಡ್ಡಿ, ಸರ್ಕಾರದ ಎಲ್ಲ ಅಧಿಕಾರಿ ಹಾಗೂ ನೌಕರರ ಆಸ್ತಿ ವಿವರಗಳ ಮಾಹಿತಿ ನೀಡಬೇಕು. ಅಲ್ಲದೇ, ಆಸ್ತಿಯ ವಿವರಗಳನ್ನು ಸರ್ಕಾರಿ ವೆಬ್ ಸೈಟ್ ಗಳಲ್ಲಿ ಪ್ರಕಟಿಸುವಂತೆ ಕ್ರಮ ವಹಿಸಬೇಕು ಎಂದು ಇಲಾಖಾ ಮುಖ್ಯಸ್ಥರಿಗೆ ನಿರ್ದೇಶಿಸಬೇಕು ಎಂದು ಕೋರಿದ್ದಾರೆ.
ಆರೋಪ ಎದುರಿಸುತ್ತಿದ್ದ ಸರ್ಕಾರಿ ನೌಕರರ ಆಸ್ತಿ ವಿವರ ನೀಡುವಂತೆ ಲೋಕಾಯುಕ್ತ ಹಲವು ಬಾರಿ ಸಂಬಂಧಪಟ್ಟ ಇಲಾಖಾ ಮುಖ್ಯಸ್ಥರಿಗೆ ಹಲವು ಬಾರಿ ಮನವಿ ಮಾಡಿದರೂ ಕ್ಯಾರೆ ಎನ್ನದ ಅಧಿಕಾರಿಗಳ ವಿರುದ್ಧ ಈ ರೀತಿ ಸಮರ ಸಾರಿದಂತಾಗಿದೆ. ರಾಜ್ಯ ಸರ್ಕಾರಿ ನೌಕರರು ಹಾಗೂ ಅಖಿಲ ಭಾರತ ಸೇವೆಗಳ ನಿಯಮಗಳು 1968ರ (16) ಅನ್ವಯ ಸರ್ಕಾರಿ ನೌಕರರು ನೇಮಕಾತಿ ಹೊಂದಿದ ದಿನದಿಂದಲೇ ಪ್ರತಿ 12 ತಿಂಗಳ ಅವಧಿಯಲ್ಲಿ ಅವರ ಹಾಗೂ ಕುಟುಂಬದ ಎಲ್ಲ ಸದಸ್ಯರ ಆಸ್ತಿ ಹಾಗೂ ಹೊಣೆಗಾರಿಕೆ ವಿವರ ಸಲ್ಲಿಸಬೇಕೆಂಬ ನಿಯಮ ಪಾಲಿಸಬೇಕು. ಈ ನಿಯಮ ಪಾಲನೆಯಾಗದಿದ್ದರೆ ಅಧಿಕಾರಿ/ನೌಕರರ ದುರ್ನಡತೆಯಾಗಲಿದೆ ಎಂದು ಪತ್ರದಲ್ಲಿ ಉಲ್ಲೇಖಿಸಿ ಬರೆಯಲಾಗಿದೆ.