ಶಿವಮೊಗ್ಗ: ಗುತ್ತಿಗೆದಾರರೊಬ್ಬರಿಂದ 1.2 ಲಕ್ಷ ರೂ. ಲಂಚ ಪಡೆಯುತ್ತಿದ್ದ ವೇಳೆ ಶಿವಮೊಗ್ಗ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ, ಇಬ್ಬರು ಅಧಿಕಾರಿಗಳನ್ನು ಬಂಧಿಸಿದ್ದಾರೆ.
ಭದ್ರಾ ಅಣೆಕಟ್ಟೆಯ ಗೊಂದಿ ಬಲದಂಡೆ ನಾಲೆಯ ಸಿಲ್ಟ್ ತೆಗೆಯುವ ಕಾಮಗಾರಿ ಕಳೆದ ವರ್ಷ ಜನವರಿಯಲ್ಲಿ ಮುಗಿದಿತ್ತು. ಆದರೆ, ಗುತ್ತಿಗೆದಾರರಿಗೆ ಟೆಂಡರ್ ಹಣ 9,36,999 ಲಕ್ಷ ರೂ. ಮಂಜೂರಾಗಿರಲಿಲ್ಲ. ಮಂಜುರಾತಿಗಾಗಿ ಗುತ್ತಿಗೆದಾರರು ಹಲವು ಬಾರಿ ಮನವಿ ಮಾಡಿದ್ದರು. ಆದರೆ, ನೀರಾವರಿ ನಿಗಮದ ಸೆಕ್ಷನ್ ಆಫೀಸರ್ ಕೊಟ್ರಪ್ಪ, ಬಿಲ್ ಮಂಜೂರಾಗಬೇಕಿದ್ದರೆ 1.20 ಲಕ್ಷ ರೂ. ಹಣ ನೀಡುವಂತೆ ಬೇಡಿಕೆಯಿಟ್ಟಿದ್ದರು ಎನ್ನಲಾಗಿದೆ. ಈ ಕುರಿತು ಬಳ್ಳಾರಿಯ ಗುತ್ತಿಗೆದಾರ ರವಿ ಲೋಕಾಯುಕ್ತಕ್ಕೆ ದೂರು ನೀಡಿದ್ದರು.
ದೂರಿನ ಹಿನ್ನೆಲೆಯಲ್ಲಿ ಕೊಟ್ರಪ್ಪ, ಕಚೇರಿಯ ಅರವಿಂದ್ ಎಂಬುವರಿಂದ 1.20 ಲಕ್ಷ ರೂ. ಹಣ ಸ್ವೀಕರಿಸುತ್ತಿದ್ದಾಗ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಹಣದ ಜೊತೆಗೆ ಕೊಟ್ರಪ್ಪ ಹಾಗೂ ಅರವಿಂದ್ ಎಂಬುವವರನ್ನು ವಶಕ್ಕೆ ಪಡೆದಿದ್ದಾರೆ. ಲೋಕಾಯುಕ್ತ ಪೊಲೀಸ್ ಇನ್ಸ್ಪೆಕ್ಟರ್ ವೀರಭದ್ರಪ್ಪ ಕುಸಲಾಪುರ ನೇತೃತ್ವದಲ್ಲಿ ದಾಳಿ ನಡೆದಿತ್ತು.