ನವದೆಹಲಿ: ಕೇಂದ್ರ ಸರ್ಕಾರದಿಂದ ಹೊಸ ವರ್ಷದ ಸಂದರ್ಭದಲ್ಲಿ ರೈತರಿಗೆ ಗುಡ್ ನ್ಯೂಸ್ ವೊಂದು ಸಿಕ್ಕಿದೆ.
ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ ಮತ್ತು ಪುನರ್ ರಚನೆ ಮಾಡಿದ ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆ ಮುಂದುವರೆಸಲು ಸರ್ಕಾರ ಒಪ್ಪಿಗೆ ಸೂಚಿಸಿದೆ. ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಈ ಕುರಿತು ತೀರ್ಮಾನ ಕೈಗೊಳ್ಳಲಾಗಿದೆ.
ಈ ಕುರಿತು ಸುದ್ದಿಗಾರರಿಗೆ ಮಾಹಿತಿ ನೀಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್, ಯೋಜನೆಗಳನ್ನು ಮುಂದುವರೆಸಲು ಇಂದು ನಿರ್ಧಾರ ಕೈಗೊಳ್ಳಲಾಗಿದೆ. ಈ ನಿರ್ಧಾರವು 2025-26 ರವರೆಗೆ ದೇಶಾದ್ಯಂತ ರೈತರಿಗೆ ನೈಸರ್ಗಿಕ ವಿಕೋಪಗಳಿಂದ ಉಂಟಾಗುವ ಬೆಳೆಗಳ ನಾಶದಿಂದ ತಪ್ಪಿಸಿಕೊಳ್ಳಲು ಸಹಾಯ ಮಾಡುತ್ತದೆ ಎಂದು ಹೇಳಿದ್ದಾರೆ.
ತಂತ್ರಜ್ಞಾನವನ್ನು ಬಳಸಿಕೊಂಡು ಕನಿಷ್ಠ ಶೇ. 30ರಷ್ಟು ತೂಕದೊಂದಿಗೆ ಇಳುವರಿ ಅಂದಾಜಿಗಾಗಿ ರಿಮೋಟ್ ಸೆನ್ಸಿಂಗ್ ತಂತ್ರಜ್ಞಾನ ಬಳಸಲಾಗುತ್ತದೆ. 9 ಪ್ರಮುಖ ರಾಜ್ಯಗಳು ಇದನ್ನು ಜಾರಿಗೊಳಿಸುತ್ತಿವೆ. ಆಂಧ್ರ ಪ್ರದೇಶ, ಅಸ್ಸಾಂ, ಹರಿಯಾಣ, ಉತ್ತರ ಪ್ರದೇಶ, ಮಧ್ಯಪ್ರದೇಶ, ಮಹಾರಾಷ್ಟ್ರ, ಒಡಿಶಾ, ತಮಿಳುನಾಡು, ಕರ್ನಾಟಕ ರಾಜ್ಯಗಳು ಈ ತಂತ್ರಜ್ಞಾನ ಅಳವಡಿಸಿಕೊಂಡಿವೆ. ಇನ್ನುಳಿದ ರಾಜ್ಯಗಳು ಸದ್ಯದಲ್ಲೇ ಅಳವಡಿಸಿಕೊಳ್ಳಲಿವೆ ಎಂದಿದ್ದಾರೆ.
ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ (PMFBY) ಸರ್ಕಾರಿ ಪ್ರಾಯೋಜಿತ ಬೆಳೆ ವಿಮಾ ಯೋಜನೆಯಾಗಿದೆ. ಅನಿರೀಕ್ಷಿತ ಘಟನೆಗಳಿಂದ ಬೆಳೆ ನಷ್ಟ ಅಥವಾ ಹಾನಿಯನ್ನು ಎದುರಿಸುತ್ತಿರುವ ರೈತರಿಗೆ ಹಣಕಾಸಿನ ನೆರವು ನೀಡುವ ಮೂಲಕ ಕೃಷಿ ವಲಯದಲ್ಲಿ ಸುಸ್ಥಿರ ಉತ್ಪಾದನೆ ಬೆಂಬಲಿಸುವ ಗುರಿ ಹೊಂದಿದೆ ಎಂದಿದ್ದಾರೆ. ಈ ಯೋಜನೆಯು ರೈತರ ಆದಾಯವನ್ನು ಸ್ಥಿರಗೊಳಿಸುತ್ತದೆ, ನವೀನ ಕೃಷಿ ಪದ್ಧತಿಗಳನ್ನು ಅಳವಡಿಸಿಕೊಳ್ಳುವುದನ್ನು ಉತ್ತೇಜಿಸುತ್ತದೆ. ಅಲ್ಲದೇ, ಆಹಾರ ಭದ್ರತೆ ಒದಗಿಸುತ್ತದೆ ಎಂದಿದ್ದಾರೆ.