ಆನ್ ಲೈನ್ ವಂಚಕರ ಕುರಿತು ಎಷ್ಟು ಜಾಗೃತಿ ಮೂಡಿಸಿದರೂ ವಂಚನೆ ನಿಲ್ಲುತ್ತಿಲ್ಲ. ಷೇರು ಮಾರುಕಟ್ಟೆಯಲ್ಲಿ ಹಣ ಡಬಲ್ ಮಾಡುತ್ತೇವೆ ಎಂದೋ, ನಿಮ್ಮನ್ನು ಡಿಜಿಟಲ್ ಅರೆಸ್ಟ್ ಮಾಡಲಾಗಿದೆ ಎಂದು ಬೆದರಿಸಿ ಕೋಟ್ಯಂತರ ರೂ. ವಂಚನೆ ಮಾಡಿದ ಕೇಸ್ ಗಳು ನಿತ್ಯ ಸುದ್ದಿಯಾಗುತ್ತಿವೆ. ಹಾಗಾದರೆ, ಏನಿದು ಆನ್ ಲೈನ್ ವಂಚನೆ? ವಂಚಕರು ಹೇಗೆ ಟ್ರ್ಯಾಪ್ ಮಾಡ್ತಾರೆ? ಜನ ಹೇಗೆ ಸುರಕ್ಷತೆಯಿಂದ ಇರಬೇಕು ಎಂಬುದರ ಮಾಹಿತಿಯೇ ಈ ಸ್ಟೋರಿ.
ಹೌದು, ಕರ್ನಾಟಕದಲ್ಲಿ ದಿನೇ ದಿನೆ ಸೈಬರ್ ವಂಚನೆಗಳ ಪ್ರಕರಣಗಳು ಜಾಸ್ತಿಯಾಗುತ್ತಿವೆ. ಇದಕ್ಕೆ ಬೆಸ್ಟ್ ಎಕ್ಸಾಂಪಲ್ ಎಂಬಂತೆ, ಕಳೆದ ಆರು ವರ್ಷದಲ್ಲಿ ಸಾವಿರಾರು ಜನ ವಂಚನೆ ಜಾಲಕ್ಕೆ ಸಿಲುಕಿ ಒಟ್ಟು 3,595 ಕೋಟಿ ರೂ. ಕಳೆದುಕೊಂಡಿದ್ದಾರೆ ಎಂದು ಸರ್ಕಾರವೇ ಮಾಹಿತಿ ನೀಡಿರುವುದು ಎಲ್ಲರನ್ನೂ ಬೆಚ್ಚಿಬೀಳಿಸಿದೆ. ರಾಜ್ಯದಲ್ಲಿ ಸೈಬರ್ ವಂಚನೆ ಪ್ರಕರಣಗಳು ಶೇ.137ರಷ್ಟು ಏರಿಕೆಯಾಗಿರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ಆತಂಕ ತಂದೊಡ್ಡಿದೆ.
ಯಾವ ವರ್ಷ ಎಷ್ಟು ಕೇಸ್?
ವರ್ಷ ಹಣ
2019 71 ಕೋಟಿ ರೂಪಾಯಿ
2020 105 ಕೋಟಿ ರೂಪಾಯಿ
2021 145 ಕೋಟಿ ರೂಪಾಯಿ
2022 363 ಕೋಟಿ ರೂಪಾಯಿ
2023 862 ಕೋಟಿ ರೂಪಾಯಿ
2024 2,047 ಕೋಟಿ ರೂಪಾಯಿ
ಆನ್ ಲೈನ್ ವಂಕಚರು ಪ್ರತಿ ದಿನ ಒಂದೊಂದು ರೀತಿಯಲ್ಲಿ ಜನರಿಗೆ ಮೋಸ ಮಾಡುತ್ತಿದ್ದಾರೆ.
ಹೌದು! ತಂತ್ರಜ್ಞಾನ ಎಷ್ಟು ಉಪಯೋಗವಾಗುತ್ತಿದೆಯೋ, ಅಷ್ಟೇ ದುರ್ಬಳಕೆಗೂ ಕಾರಣವಾಗುತ್ತಿದೆ. ಜನ ಕೋಟ್ಯಂತರ ರೂ. ಕಳೆದುಕೊಳ್ಳುತ್ತಿದ್ದಾರೆ. ಅದರಲ್ಲೂ, ಪ್ರಸಕ್ತ ವರ್ಷದಲ್ಲಿಯೇ ಜನ 2 ಸಾವಿರ ಕೋಟಿ ರೂ. ಕಳೆದುಕೊಂಡಿರುವುದು ಶಾಕಿಂಗ್ ಆಗಿದೆ. ಅದರಲ್ಲೂ, ಪ್ರತಿ ನಿಮಿಷಕ್ಕೆ ಜನ ಸರಾಸರಿ 7 ಲಕ್ಷ ರೂ. ಕಳೆದುಕೊಳ್ಳುತ್ತಿದ್ದಾರೆ ಎಂದರೆ ಸೈಬರ್ ಖದೀಮರು ಅದೆಷ್ಟು ಚಾಲಾಕಿಗಳಿರಬೇಕು ಯೊಚಿಸಿ!!
ಆನ್ ಲೈನ್ ವಂಚಕರು ತುಂಬ ಚಾಲಾಕಿಗಳಾಗಿದ್ದಾರೆ. ಇವರು ಹಿರಿಯ ನಾಗರಿಕರನ್ನು, ಟೆಕ್ಕಿಗಳನ್ನು ಗುರಿಯಾಗಿಸಿ, ಅವರಿಗೆ ಕರೆ ಮಾಡಿ, ಹಲವು ರೀತಿಯಲ್ಲಿ ಮೋಸ ಮಾಡುತ್ತಿದ್ದಾರೆ. ನೀವು ಡಿಜಿಟಲ್ ಅರೆಸ್ಟ್ ಆಗಿದ್ದೀರಿ, ಬಂಧಿಸಬಾರದು ಎಂದರೆ ಇಷ್ಟು ದುಡ್ಡು ಕೊಡಿ, ನಿಮ್ಮ ಓಟಿಪಿ ಹೇಳಿ, ನಿಮಗೆ ವಿದೇಶದಿಂದ ಪಾರ್ಸೆಲ್ ಬಂದಿದೆ, ಅದರ ಟ್ಯಾಕ್ಸ್ ಕಟ್ಟಿ ಎಂದು ಅಗತ್ಯ ಡೇಟಾ ಪಡೆಯುತ್ತಾರೆ. ಟೆಕಿಗಳಾದರೆ, ಷೇರು ಮಾರುಕಟ್ಟೆಯಲ್ಲಿ ನಿಮ್ಮ ಹಣ ಡಬ್ಬಲ್ ಆಗುತ್ತೆ, ಹೂಡಿಕೆ ಮಾಡಿ ಎಂದು ಮೋಸ ಮಾಡ್ತಿದಾರೆ.
ಹೌದು, ನಾವು ಕಷ್ಟಪಟ್ಟು ದುಡಿದ ಹಣವನ್ನು ರಕ್ಷಿಸಿಕೊಳ್ಳಬೇಕು. ಅದಕ್ಕಾಗಿ, ಯಾರೂ ಒಟಿಪಿ ಶೇರ್ ಮಾಡಬಾರದು. ವಾಟ್ಸ್ಆ್ಯಪ್ ನಲ್ಲಿ ಬರುವ ಅನಾಮಧೇಯ ವ್ಯಕ್ತಿಗಳ ಲಿಂಕ್ ಗಳ ಮೇಲೆ ಕ್ಲಿಕ್ ಮಾಡಬಾರದು. ಹಣ ದುಪ್ಪಟ್ಟು ಮಾಡುತ್ತೇವೆ ಎಂದವರ ಮಾತು ಕೇಳಬಾರದು. ಡಿಜಿಟಲ್ ಅರೆಸ್ಟ್ ಎಂದರೆ ಮನೆಗೆ ಬನ್ನಿ ಎನ್ನಬೇಕು. ಹಿಂದಿ, ಇಂಗ್ಲಿಷ್ ನಲ್ಲಿ ಮಾತನಾಡಿದವರಿಗೆ ಕನ್ನಡದಲ್ಲೇ ಮಾತನಾಡಬೇಕು. ಇದೆಲ್ಲ ಮಾಡಿದರೆ ನಮ್ಮ ಹಣ ಸೇಫ್ ಆಗಿರುತ್ತೆ.
ಹಾಗೊಂದು ವೇಳೆ ಸೈಬರ್ ವಂಚನೆಗೀಡಾದರೆ ಕೂಡಲೇ 1930 ಸಹಾಯವಾಣಿಗೆ ಕರೆ ಮಾಡಿ ದೂರು ದಾಖಲಿಸಬೇಕು. ಇಲ್ಲವೇ https://cybercrime.gov.in/ ಗೆ ಭೇಟಿ ನೀಡಿ, ಕೇಸ್ ದಾಖಲಿಸಬೇಕು.
ಹೌದು, ನೀವೊಂದು ವೇಳೆ ಆನ್ ಲೈನ್ ನಲ್ಲಿ ಹಣ ಕಳೆದುಕೊಂಡಿದ್ದರೆ, ವಂಚನೆಗೀಡಾಗಿದ್ದರೆ ಕೂಡಲೇ ಸಹಾಯವಾಣಿಗೆ ಕರೆ ಮಾಡಿ. ಇದು ಕೇಂದ್ರ ಸರಕಾರದ ಸಹಾಯವಾಣಿಯಾಗಿದ್ದು, ಪೋರ್ಟಲ್ ನಿಂದಲೂ ಇದುವರೆಗೆ 3,431 ಕೋಟಿ ರೂ. ವಂಚನೆ ತಡೆಯಲಾಗಿದೆ. ಸುಮಾರು 10 ಲಕ್ಷ ಪ್ರಕರಣಗಳನ್ನು ಸಾಲ್ವ್ ಮಾಡಲಾಗಿದೆ..ಬಂಧುಗಳೇ, ಒಟ್ಟಿನಲ್ಲಿ ಹೆಚ್ಚಿನ ಸೈಬರ್ ವಂಚಕರ ಆಸೆ-ಆಮಿಷ ತೋರಿಸಿ ಹಳ್ಳಕ್ಕೆ ಬೀಳಿಸೋದಾಗಿದೆ. ಆಸೆ, ಅತಿ ಆಸೆಗಳು ಅಂಕೆಯಲ್ಲಿದ್ದರೆ ಖದೀಮರ ಗಾಳಕ್ಕೆ ನೀವು ಸಿಗಲಾರಿರಿ. ಹಾಗೆಯೇ ಭಯ ಬೀಳಿಸಿ, ಬಲೆಗೆ ಕೆಡವಿಕೊಳ್ಳುವ ವಂಚಕರ ಬಗ್ಗೆಯೂ ಮಾಹಿತಿ ಇರಲಿ. ಮೈಮೇಲೆ ಪ್ರಜ್ಞೆ ಇರಲಿ. ಮನಸ್ಸಿನ ಮೇಲೆ ಹಿಡಿತವಿರಲಿ. ಸಮಾಜದ ಮೇಲೆ ಸದಾ ಗಮನವಿರಲಿ…ನಿಮ್ಮ ಬದುಗಕು ಸುರಕ್ಷಿತವಾಗಿರಲಿ…ನಮಸ್ಕಾರ