ಬಂಧುಗಳೇ, ಕರ್ನಾಟಕ ನ್ಯೂಸ್ ಬೀಟ್ ಗೆ ಸ್ವಾಗತ. ಇಂದು ನಾವು ಕಣ್ಣಾಡಿಸಿದ್ದು ನಮ್ಮ ಸರ್ಕಾರಿ ಶಾಲೆಗಳತ್ತ..
ಹೌದು!ರಾಜ್ಯದ ಸರ್ಕಾರಿ ಶಾಲೆಗಳು ದುಃಸ್ಥಿತಿಯಲ್ಲಿವೆ. ಸುಸಜ್ಜಿತ ಕಟ್ಟಡ, ಮಕ್ಕಳಿಗೆ ಮೂಲ ಸೌಕರ್ಯ ಕೊರತೆ, ಗುಣಮಟ್ಟದ ಶಿಕ್ಷಣದ ಸಮಸ್ಯೆಯಿಂದ ಸರ್ಕಾರಿ ಶಾಲೆಗಳು ಬಳಲುತ್ತಿವೆ. ಇದೇ ಕಾರಣಕ್ಕಾಗಿ ಬಡವರು ಕೂಡ ಸಾಲ ಮಾಡಿ ಖಾಸಗಿ ಶಾಲೆಗಳಿಗೆ ಮಕ್ಕಳನ್ನು ಕಳುಹಿಸುವಂತಾಗಿದೆ. ಇದರ ಬೆನ್ನಲ್ಲೇ, ರಾಜ್ಯ ಸರ್ಕಾರಿ ಶಾಲೆಗಳಲ್ಲಿ 59 ಸಾವಿರಕ್ಕೂ ಅಧಿಕ ಶಿಕ್ಷಕರ ಹುದ್ದೆಗಳು ಖಾಲಿ ಇವೆ. ಅದರಲ್ಲೂ, 6 ಸಾವಿರಕ್ಕೂ ಅಧಿಕ ಶಾಲೆಗಳಲ್ಲಿ ಒಬ್ಬರೇ ಶಿಕ್ಷಕರಿರೋದು ಅಂದ್ರೆ, ಬಡವರ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಸಿಗೋಕೆ ಹೇಗೆ ಸಾಧ್ಯವೇ?
ರಾಜ್ಯದ ಸರ್ಕಾರಿ ಶಾಲೆಗಳಿಗೆ 59 ಸಾವಿರಕ್ಕೂ ಅಧಿಕ ಶಿಕ್ಷಕರು ಬೇಕಾಗಿದ್ದರೂ ಸರ್ಕಾರ ಮಾತ್ರ ನೇಮಕಾತಿಗೆ ಮುಂದಾಗುತ್ತಿಲ್ಲ ಎಂಬುದು ಪದವೀಧರರ ಆಕ್ರೋಶಕ್ಕೆ ಕಾರಣವಾಗಿದೆ. ಬಿ.ಎಡ್, ಎಂ.ಎ ಮುಗಿಸಿದ ಲಕ್ಷಾಂತರ ಅಭ್ಯರ್ಥಿಗಳು ಹುದ್ದೆ ಭರ್ತಿಗಾಗಿ ಚಾತಕ ಪಕ್ಷಿಗಳಂತೆ ಕಾಯುತ್ತಿದ್ದಾರೆ. ನಿರುದ್ಯೋಗಿಗಳು ಮನೆಯಲ್ಲಿ ಕುಳಿತಿದ್ದಾರೆ. ಹೊಟ್ಟೆಪಾಡಿಗಾಗಿ ಸಾವಿರಾರು ಅಭ್ಯರ್ಥಿಗಳು ಅತಿಥಿ ಶಿಕ್ಷಕರಾಗಿ ಕಡಿಮೆ ಸಂಬಳಕ್ಕೆ ದುಡಿಯುತ್ತಿದ್ದಾರೆ.
ಇಷ್ಟಾದರೂ ಸರ್ಕಾರ ಮಾತ್ರ ಹೆಚ್ಚಿನ ಸಂಖ್ಯೆಯ ಶಿಕ್ಷಕರನ್ನು ನೇಮಕ ಮಾಡದಿರುವುದು ಅಭ್ಯರ್ಥಿಗಳು ಮಾತ್ರವಲ್ಲ, ಮಕ್ಕಳ ಭವಿಷ್ಯಕ್ಕೂ ಕಾರ್ಮೋಡ ಕವಿಯುವಂತೆ ಮಾಡಿದೆ.
ನೇಮಕಾತಿ ಮಾಡದ ಕಾರಣ ರಾಜ್ಯದ ಪ್ರಾಥಮಿಕ ಶಾಲೆಗಳಲ್ಲಿ ಗಣಿತ ಹಾಗೂ ವಿಜ್ಞಾನ ಬೋಧಿಸುವ ಶಿಕ್ಷಕರ ಕೊರತೆಯು ಗಣನೀಯವಾಗಿ ಜಾಸ್ತಿಯಾಗಿದೆ. ಅದರಲ್ಲೂ, 1ರಿಂದ 5ನೇ ತರಗತಿ ಮಕ್ಕಳಿಗೆ ಗಣಿತ ಹಾಗೂ ವಿಜ್ಞಾನ ಹೇಳಿಕೊಡುವವರೇ ಇಲ್ಲದಂತಾಗಿದೆ. ಅಂಕಿ-ಅಂಶಗಳ ಪ್ರಕಾರ, ರಾಜ್ಯದ 22 ಲಕ್ಷ ವಿದ್ಯಾರ್ಥಿಗಳಿಗೆ ಕೇವಲ 8,895 ಗಣಿತ ಹಾಗೂ ವಿಜ್ಞಾನ ಶಿಕ್ಷಕರಿದ್ದಾರೆ ಎಂದು ತಿಳಿದುಬಂದಿದೆ. ಪರಿಸ್ಥಿತಿ ಹೀಗೆಯೇ ಮುಂದುವರಿದರೆ, ಸ್ಪರ್ಧಾತ್ಮಕ ಯುಗದಲ್ಲಿ ಮಕ್ಕಳು ಹೇಗೆ ಸ್ಪರ್ಧಿಸಬೇಕು? ಅವರ ಭವಿಷ್ಯ ಹೇಗೆ ಎಂಬ ಚಿಂತೆ ಬಡಪಾಯಿ ಪೋಷಕರದ್ದು!
ರಾಜ್ಯದಲ್ಲಿ ಪ್ರಾಥಮಿಕ ಶಾಲೆ, ಪ್ರೌಢಶಾಲೆ ಹಾಗೂ ಪಿಯು ಕಾಲೇಜುಗಳಲ್ಲಿ ಸಾವಿರಾರು ಅತಿಥಿ ಶಿಕ್ಷಕರು ಹಾಗೂ ಉಪನ್ಯಾಸಕರು ಕಡಿಮೆ ವೇತನ ಪಡೆಯುತ್ತಿದ್ದಾರೆ. ಪ್ರಾಥಮಿಕ ಶಾಲೆ ಅತಿಥಿ ಶಿಕ್ಷಕರಿಗಂತೂ ಕೇವಲ 10 ಸಾವಿರ ರೂ. ಗೌರವಧನ ಇದೆ. 2022ರಿಂದಲೂ ಇವರ ವೇತನ ಬಿಡಿಗಾಸೂ ಏರಿಕೆಯಾಗಿಲ್ಲ. ಕೆಲ ದಿನಗಳ ಹಿಂದೆ ನಡೆದ ಬೆಳಗಾವಿ ಅಧಿವೇಶನದಲ್ಲೂ ಇವರ ವೇತನ ಹೆಚ್ಚಳದ ಕುರಿತು ಸರ್ಕಾರ ಯಾವುದೇ ತೀರ್ಮಾನ ತೆಗೆದುಕೊಂಡಿಲ್ಲ. ಹಾಗಾಗಿ, ಶಿಕ್ಷಕರು ಹಾಗೂ ಉಪನ್ಯಾಸಕರು ಪ್ರತಿಭಟನೆಯ ಹಾದಿ ಹಿಡಿದಿದ್ದಾರೆ.
ಅತಿಥಿ ಶಿಕ್ಷಕರ ವೇತನ ಹೆಚ್ಚಿಸಲಾಗುವುದು ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಕೆಲ ತಿಂಗಳ ಹಿಂದೆ ಹೇಳಿದ್ದರು. ಆ ವೇಳೆ ಬೆಳಗಾವಿ ಅಧಿವೇಶನದ ನೆಪ ಹೇಳಿದ್ದರು. ಆದರೆ, ವೇತನ ಹೆಚ್ಚಳದ ಕುರಿತು ಇದುವರೆಗೆ ಆದೇಶ ಹೊರಡಿಸಿಲ್ಲ. ಸರ್ಕಾರಿ ನೌಕರರಿಗೆ 7ನೇ ವೇತನ ಆಯೋಗದ ಅನ್ವಯ ಒಳ್ಳೆಯ ಸಂಬಳ ಸಿಗುತ್ತಿದೆ. ಇತ್ತ ನಮಗೂ ಹೆಚ್ಚಿನ ಸಂಬಳ ಕೊಡಿ ಎಂದು ಅತಿಥಿ ಶಿಕ್ಷಕರು ಹಾಗೂ ಉಪನ್ಯಾಸಕರು ಬೇಡಿಕೆ ಇರಿಸುತ್ತಲೇ ಬಂದಿದ್ದಾರೆ. ಸಂಬಳ ಕಡಿಮೆ ಇರುವ ಕಾರಣ ಹೆಣ್ಣು ಸಿಗುತ್ತಿಲ್ಲ ಎಂದೂ ಗೋಳು ತೋಡಿಕೊಳ್ಳುತ್ತಿದ್ದಾರೆ. ಇಷ್ಟಾದರೂ ಸರ್ಕಾರವು ಜಾಣ ಕಿವುಡು ಪ್ರದರ್ಶಿಸುತ್ತಾ ಶಿಕ್ಷಕ ವೃಂದವನ್ನು ಶೋಚನೀಯ ಸ್ಥಿತಿಗೆ ತಳ್ಳುತ್ತಿರೋದು ಮಾತ್ರ ದುರಂತ.
ರಾಜ್ಯದಲ್ಲಿರುವ ಸರ್ಕಾರಿ ಶಾಲೆಗಳ ಬಗ್ಗೆ ಪೋಷಕರಿಗೆ ಬೇಸರವಿದೆ. ಮೂಲ ಸೌಕರ್ಯ, ಗುಣಮಟ್ಟದ ಸೌಕರ್ಯ ಸೇರಿ ಹಲವು ಕೊರತೆಗಳಿರುವ ಕಾರಣ ಮಕ್ಕಳನ್ನು ಬಡವರು ಕೂಡ ಖಾಸಗಿ ಶಾಲೆಗೆ ಸೇರಿಸುವಂತಾಗಿದೆ. ಇದು ಸರ್ಕಾರಿ ಶಾಲೆಗಳ ಭವಿಷ್ಯ ಮಾತ್ರವಲ್ಲ, ಪೋಷಕರನ್ನು ಸಾಲಗಾರರನ್ನಾಗಿ ಮಾಡುತ್ತಿದೆ. ಮೇಲಾಗಿ, ಕನ್ನಡಕ್ಕೆ ಹೊಡೆತ ಬೀಳುತ್ತಿದೆ. ಇನ್ನಾದರೂ ಸರ್ಕಾರ ಎಚ್ಚೆತ್ತುಕೊಳ್ಳಲಿ. ಸರ್ಕಾರಿ ಶಾಲೆ, ಪದವೀಧರರು, ಬಡವರ ಮಕ್ಕಳು ಹಾಗೂ ಕನ್ನಡ ಉಳಿಸುವ ಕೆಲಸಕ್ಕೆ ಮೊದಲು ಕೈಹಾಕಲಿ ಎಂಬುವುದು ಕರ್ನಾಟಕ ನ್ಯೂಸ್ ಬೀಟ್ ಆಶಯ!.