ಬೆಂಗಳೂರು: ಹೊಸ ವರ್ಷ ಆಗಮನಕ್ಕೆ ಕ್ಷಣಗಣನೆ ಆರಂಭವಾಗಿದೆ. ಹೊಸ ವರ್ಷ (New Year) ಬರಮಾಡಿಕೊಳ್ಳಲು ಜಸ್ಟ್ ಕೆಲವೇ ಗಂಟೆಗಳು ಬಾಕಿ ಉಳಿದಿದೆ. ಹೊಸ ವರ್ಷದ ಸಂಭ್ರಮದಲ್ಲಿ ಮಿಂದೇಳಲು ಸಿಟಿ ಮಂದಿ (Bengaluru) ಸಜ್ಜಾಗಿ ನಿಂತಿದ್ದಾರೆ. ಈ ವೇಳೆ ಏನಾದರೂ ಪೋಲಿ ಆಟ ನಡೆಸಿದರೆ, ಕಠಿಣ ಕ್ರಮ ಕೈಗೊಳ್ಳಲು ಪೊಲೀಸರು ಸಜ್ಜಾಗಿ ನಿಂತಿದ್ದಾರೆ.
ಸೆಲೆಬ್ರೇಷನ್ ನಲ್ಲಿ ಬೇಕಾಬಿಟ್ಟಿ ಹಾರಾಡಿದರೆ, ವಿಚಿತ್ರ ವಿಚಿತ್ರವಾಗಿ ಮಾಸ್ಕ್ (Weird Face Mask) ಧರಿಸುವವರಿಗೆ ಹೊಸ ಮಾರ್ಗಸೂಚಿ ಪ್ರಕಟಿಸಲಾಗಿದೆ. ಹೊಸ ವರ್ಷಾಚರಣೆಯ ಹಿನ್ನೆಲೆಯಲ್ಲಿ ಎಂಜಿ ರೋಡ್, ಬ್ರಿಗೇಡ್ ರೋಡ್ ನಲ್ಲಿ ಜನಜಂಗುಳಿಯೇ ಇರುತ್ತದೆ. ಈ ಮಧ್ಯೆ ಮುನ್ನೆಚ್ಚರಿಕಾ ಕ್ರಮವಾಗಿ ಹಲವು ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಲಾಗಿದ್ದು, ಸಾವಿರಾರು ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ.
ಯಾವುದೇ ವ್ಯಕ್ತಿ ಇನ್ನೊಬ್ಬ ವ್ಯಕ್ತಿಗೆ ತೊಂದರೆ ಮಾಡುವಂತಿಲ್ಲ. ಆಚರಣೆ ವೇಳೆ ಜೋರಾಗಹಿ ಕೂಗುವುದು, ಪಿಪಿ ಊದುವುದು, ವಿಚಿತ್ರವಾಗಿ ವರ್ತಿಸುವುದು, ಭೀಬತ್ಸವಾಗಿರುವ ಮಾಸ್ಕ್ ಗಳನ್ನು ಉಪಯೋಗಿಸುವುದನ್ನು ನಿಷೇಧಿಸಲಾಗಿದೆ. ಈ ಮಾರ್ಗಸೂಚಿಗಳನ್ನು ಮೀರಿದರೆ ಅಂತವರ ವಿರುದ್ದ ಪೊಲೀಸರು ಕ್ರಮ ಕೈಗೊಳ್ಳಲಿದ್ದಾರೆ.
ಎಂಜಿ ರೋಡ್ ನಲ್ಲಿ ಈಗಾಗಲೇ ಪೊಲೀಸರು ಬೀಡು ಬಿಟ್ಟಿದ್ದಾರೆ. ಅಲ್ಲದೇ, SDRF ಎರಡು ವಾಹನಗಳು ಹಾಗೂ 20 ಸಿಬ್ಬಂದಿಗಳನ್ನು ನಿಯೋಜನೆ ಮಾಡಲಾಗಿದೆ. KSRP ಯ ಎರಡು ತುಕಡಿಯನ್ನೂ ನಿಯೋಜಿಸಲಾಗಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಕಮಾಂಡ್ & ಕಂಟ್ರೋಲ್ ರೂಂ, ಅಗ್ನಿಶಾಮಕ ದಳದ 10 ಜನ ಸಿಬ್ಬಂದಿಗಳನ್ನೂ ನಿಯೋಜಿಸಲಾಗಿದೆ.
ಈ ಮಧ್ಯೆ ಬೆಂಗಳೂರಿನಲ್ಲಿ ನ್ಯೂಇಯರ್ ಹಿನ್ನೆಲೆ ನಗರದ 32 ಫ್ಲೈ ಓವರ್‌ಗಳು ಬಂದ್ ಆಗಿವೆ. ಹೀಗಾಗಿ ವಾಹನ ಸವಾರರು ಸರ್ವೀಸ್ ರಸ್ತೆಯನ್ನೇ ಬಳಸಬೇಕು ಎನ್ನಲಾಗಿದೆ.