ಮೈಸೂರು: ಇಲ್ಲಿನ ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ಚಿರತೆ ಕಾಣಿಸಿಕೊಂಡಿದ್ದು, ಸಿಬ್ಬಂದಿಗೆ ವರ್ಕ್ ಫ್ರಮ್ ಹೋಮ್ ಘೋಷಿಸಲಾಗಿದೆ.
ಮಂಗಳವಾರ ಬೆಳಗ್ಗೆ ಕ್ಯಾಂಪಸ್ ನಲ್ಲಿ ಚಿರತೆ ಕಾಣಿಸಿಕೊಂಡಿದ್ದು, ಭಯದ ವಾತಾವರಣ ನಿರ್ಮಾಣವಾಗಿದೆ. ಈ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎನ್ನಲಾಗಿದೆ.
ಚಿರತೆಯ ಚಲನವಲನ ಕ್ಯಾಂಪಸ್ ನ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಆದರೆ, ಚಿರತೆಯನ್ನು ಸೆರೆ ಹಿಡಿಯುವವರೆಗೂ ಯಾವುದೇ ಸಿಬ್ಬಂದಿಯನ್ನು ಕ್ಯಾಂಪಸ್ ಒಳಗಡೆ ಬಿಡಲಾಗುವುದಿಲ್ಲ ಎಂದು ಸಂಸ್ಥೆ ಆದೇಶ ಹೊರಡಿಸಿದೆ.
ಅರಣ್ಯ ಇಲಾಖೆ ಅಧಿಕಾರಿಗಳು ಸುತ್ತಮುತ್ತಲಿನ ಪ್ರದೇಶದಲ್ಲಿ ಗಸ್ತು ತಿರುಗುತ್ತಿದ್ದು, ಚಿರತೆ ಸೆರೆಗೆ ಯತ್ನಿಸುತ್ತಿದ್ದಾರೆ. ಚಿರತೆಯ ಸುದ್ದಿ ಕೇಳಿ ಸುತ್ತಮುತ್ತಲಿನ ಪ್ರದೇಶದ ಜನರಲ್ಲೂ ಆತಂಕ ಮನೆ ಮಾಡಿದೆ. ಚಿರತೆ ಸೆರೆ ಹಿಡಿಯುವಂತೆ ಜನರು ಮನವಿ ಮಾಡ್ತಿದ್ದಾರೆ.