ಬೆಂಗಳೂರು: ಗುತ್ತಿಗೆದಾರ (Contractor) ಸಚಿನ್ ಆತ್ಮಹತ್ಯೆ ಪ್ರಕರಣದಲ್ಲಿ ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ರಾಜೀನಾಮೆಗೆ ಬಿಜೆಪಿ ಆಗ್ರಹಿಸುತ್ತಿದೆ. ಈ ಮಧ್ಯೆ ಏನೇ ಮಾಡಿದರೂ ನಾನು ರಾಜೀನಾಮೆ ನೀಡಲ್ಲ ಎದು ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ. ಇದರ ಬೆನ್ನಲ್ಲೇ ಪ್ರಿಯಾಂಕ್ ಖರ್ಗೆ ವಿರುದ್ಧ ಪೋಸ್ಟರ್ ಅಭಿಯಾನ (Poster Campaign)ವನ್ನು ಬಿಜೆಪಿ ನಡೆಸುತ್ತಿದೆ.
ವಿಪ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಸಿ.ಟಿ.ರವಿ ಎಂಎಲ್‌ಸಿ ರವಿಕುಮಾರ್, ಪ್ರಿಯಾಂಕ್ ಖರ್ಗೆ ವಿರುದ್ದ ಪೋಸ್ಟರ್ ಅಭಿಯಾನ ನಡೆಸುತ್ತಿದ್ದಾರೆ. ರೇಸ್ ಕೋರ್ಸ್ ರಸ್ತೆಯಲ್ಲಿ ಪೋಸ್ಟರ್ ಅಂಟಿಸಿದ ಬಿಜೆಪಿ ಕಾರ್ಯಕರ್ತರು, ಗುತ್ತಿಗೆದಾರನ ಸಾವಿಗೆ ಪ್ರಿಯಾಂಕ್ ಖರ್ಗೆ ಹೊಣೆಗಾರ ಎಂದು ಕಿಡಿಕಾರಿದ್ದಾರೆ. ಖರ್ಗೆ ಪ್ರಾಯೋಜಿತ ಸುಪಾರಿ ಎಂಬ ಪೋಸ್ಟರ್ ನ್ನು ಬಿಜೆಪಿ ನಾಯಕರು ಅಂಟಿಸಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಛಲವಾದಿ ನಾರಾಯಣಸ್ವಾಮಿ, ಇದು ಭ್ರಷ್ಟಾಚಾರದಲ್ಲಿ ಮುಳುಗಿರುವ ಕೊಲೆಗಡುಕ ಸರ್ಕಾರ. ಏನೇ ಮಾಡಿದರೂ ನಾವು ಕೇರ್ ಮಾಡಲ್ಲ ಅಂದುಕೊಂಡಿದ್ದಾರೆ. ಪ್ರಿಯಾಂಕ್ ಖರ್ಗೆ ಪಾತ್ರ ಇದೆಯೋ ಇಲ್ವೋ ತನಿಖೆಯಲ್ಲಿ ಗೊತ್ತಾಗಲಿದೆ.
ಇದು ಭ್ರಷ್ಟಾಚಾರ ಸರ್ಕಾರ. ಹೀಗಾಗಿ ನಾವು ಪೋಸ್ಟರ್ ಅಂಟಿಸಿದ್ದೇವೆ. ಖರ್ಗೆ ರಾಜೀನಾಮೆ ನೀಡುವವರೆಗೂ ನಾವು ಹೋರಾಟ ಮಾಡುತ್ತೇವೆ ಎಂದಿದ್ದಾರೆ.
ಪೋಸ್ಟರ್ ಅಂಟಿಸಿ ಆಕ್ರೋಶ ವ್ಯಕ್ತಪಡಿಸಿದ ಬಿಜೆಪಿ ನಾಯಕರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.