ಆಸ್ಟ್ರೇಲಿಯಾ ನೆಲದಲ್ಲಿ ಭರ್ಜರಿ ಪ್ರದರ್ಶನ ತೋರುತ್ತಿರುವ ವೇಗಿ ಜಸ್ಪ್ರೀತ್ ಬುಮ್ರಾ ಈ ವರ್ಷದ ಎಲ್ಲ ಮಾದರಿಯ ಕ್ರಿಕೆಟ್ ನಲ್ಲೂ ಅದ್ಭುತ ಪ್ರದರ್ಶನ ನೀಡಿದ್ದಾರೆ. ಈ ವರ್ಷದ ಕೊನೆಯ ಪಂದ್ಯದಲ್ಲೂ ತಮ್ಮ ಮ್ಯಾಜಿಕ್ ತೋರಿದ ಬುಮ್ರಾ ಒಟ್ಟು 9 ವಿಕೆಟ್ ಪಡೆಯುವ ಅದ್ಭುತ ಸಾಧನೆ ಮಾಡಿದ್ದಾರೆ. ಹೀಗಾಗಿ ಮತ್ತೊಂದು ಗರಿಗೆ ಪಾತ್ರರಾಗಲು ಬುಮ್ರಾ ಸಿದ್ಧರಾಗಿ ನಿಂತಿದ್ದಾರೆ.
ಪ್ರತಿಯೊಂದು ಪಂದ್ಯದಲ್ಲೂ ಉತ್ತಮ ಪ್ರದರ್ಶನ ತೋರಿರುವ ಬುಮ್ರಾರನ್ನು ಐಸಿಸಿ ಅತಿದೊಡ್ಡ ಪ್ರಶಸ್ತಿಗೆ ನಾಮನಿರ್ದೇಶನ ಮಾಡಿದೆ. ವರ್ಷದ ಅತ್ಯುತ್ತಮ ಕ್ರಿಕೆಟಿಗನಿಗೆ ನೀಡುವ ಸರ್ ಗಾರ್ಫೀಲ್ಡ್ ಸೋಬರ್ಸ್ ಟ್ರೋಫಿಗೆ ಬುಮ್ರಾ ಹೆಸರು ಶಾರ್ಟ್ ಲಿಸ್ಟ್ ನಲ್ಲಿದೆ.
ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ ಬುಮ್ರಾ ಪ್ರತಿ ಪಂದ್ಯದಲ್ಲೂ ಉತ್ತಮ ಪ್ರದರ್ಶನ ನೀಡಿದ್ದಾರೆ. ಪ್ರತಿಯೊಂದು ಪಂದ್ಯದಲ್ಲೂ ವಿಕೆಟ್ ಪಡೆಯುತ್ತ ಸಾಗಿದ್ದಾರೆ. ಹೀಗಾಗಿ ಐಸಿಸಿ ಪ್ರಮುಖ 2 ಪ್ರಶಸ್ತಿಗಳಿಗೆ ಬುಮ್ರಾರನ್ನು ನಾಮನಿರ್ದೇಶನ ಮಾಡಿದೆ. ವರ್ಷದ ಅತ್ಯುತ್ತಮ ಕ್ರಿಕೆಟಿಗ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿರುವ ಬುಮ್ರಾ ವರ್ಷದ ಅತ್ಯುತ್ತಮ ಟೆಸ್ಟ್ ಕ್ರಿಕೆಟಿಗ ಪ್ರಶಸ್ತಿಗೂ ನಾಮನಿರ್ದೇಶನಗೊಂಡಿದ್ದಾರೆ.
ಬುಮ್ರಾ ಟೆಸ್ಟ್ ಮತ್ತು ಟಿ 20 ಮಾದರಿಯಲ್ಲಿ ಮಾತ್ರ ತಂಡವನ್ನು ಪ್ರತಿನಿಧಿಸಿದ್ದು, ತಮ್ಮ ಮಾರಕ ಬೌಲಿಂಗ್ ನಿಂದ ಭಾರತ ತಂಡಕ್ಕೆ ಅನೇಕ ಸ್ಮರಣೀಯ ಗೆಲುವುಗಳನ್ನು ತಂದುಕೊಟ್ಟಿದ್ದಾರೆ. 2024ರ ಟಿ20 ವಿಶ್ವಕಪ್‌ನಲ್ಲಿ ಗರಿಷ್ಠ 15 ವಿಕೆಟ್ ಗಳನ್ನು ಕಬಳಿಸುವ ಮೂಲಕ ಟೀಂ ಇಂಡಿಯಾವನ್ನು ಚಾಂಪಿಯನ್ ಮಾಡಿದ್ದ ಬುಮ್ರಾ ಪಂದ್ಯಾವಳಿಯ ಆಟಗಾರರಾಗಿಯೂ ಆಯ್ಕೆಯಾಗಿದ್ದರು. ಟೆಸ್ಟ್ ಕ್ರಿಕೆಟ್ ನಲ್ಲಿಯೂ ಅಬ್ಬರಿಸಿರುವ ಬುಮ್ರಾ ಇಂಗ್ಲೆಂಡ್, ಬಾಂಗ್ಲಾದೇಶ, ನ್ಯೂಜಿಲೆಂಡ್ ಮತ್ತು ಈಗ ಆಸ್ಟ್ರೇಲಿಯಾದಂತಹ ತಂಡಗಳ ವಿರುದ್ಧವೂ ಅಮೋಘ ಪ್ರದರ್ಶನ ನೀಡಿದ್ದಾರೆ. ಈ ವರ್ಷದಲ್ಲಿ 13 ಟೆಸ್ಟ್ ಪಂದ್ಯಗಳನ್ನಾಡಿರುವ ಬುಮ್ರಾ 71 ವಿಕೆಟ್ ಪಡೆದಿದ್ದಾರೆ.
ಅದ್ಭುತ ಪ್ರದರ್ಶನದ ಮೂಲಕ ವರ್ಷದ ಅತ್ಯುತ್ತಮ ಕ್ರಿಕೆಟಿಗ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿರುವ ಬುಮ್ರಾ ಈ ಮೂಲಕ ಈ ಪ್ರಶಸ್ತಿ ರೇಸ್ನಲ್ಲಿರುವ ಮೊದಲ ಭಾರತೀಯ ವೇಗದ ಬೌಲರ್ ಎನಿಸಿಕೊಂಡಿದ್ದಾರೆ. 17 ಟೆಸ್ಟ್‌ಗಳಲ್ಲಿ 55 ಸರಾಸರಿಯಲ್ಲಿ ಗರಿಷ್ಠ 1556 ರನ್ ಗಳಿಸಿದ ಇಂಗ್ಲೆಂಡ್‌ನ ದಂತಕಥೆ ಬ್ಯಾಟ್ಸ್‌ಮನ್ ಜೋ ರೂಟ್ ಕೂಡ ಇದರಲ್ಲಿ ಸೇರಿದ್ದಾರೆ. ಆಸ್ಟ್ರೇಲಿಯಾದ ಸ್ಫೋಟಕ ಬ್ಯಾಟ್ಸ್‌ಮನ್ ಟ್ರಾವಿಸ್ ಹೆಡ್ ಕೂಡ ರೇಸ್ ನಲ್ಲಿದ್ದಾರೆ. ಹೆಡ್ ಈ ವರ್ಷ ಆಡಿರುವ 9 ಟೆಸ್ಟ್‌ಗಳಲ್ಲಿ 40 ಸರಾಸರಿಯಲ್ಲಿ 608 ರನ್ ಮತ್ತು 15 ಟಿ20 ಪಂದ್ಯಗಳಲ್ಲಿ 178 ಸ್ಟ್ರೈಕ್ ರೇಟ್‌ನಲ್ಲಿ 539 ರನ್ ಗಳಿಸಿದ್ದಾರೆ. ಇಂಗ್ಲೆಂಡ್‌ನ ಯುವ ಬ್ಯಾಟ್ಸ್‌ಮನ್ ಹ್ಯಾರಿ ಬ್ರೂಕ್ ಸಹ ಸ್ಪರ್ಧಿಯಾಗಿದ್ದು, 12 ಟೆಸ್ಟ್‌ಗಳಲ್ಲಿ 55 ಸರಾಸರಿಯಲ್ಲಿ 1100 ರನ್ ಗಳಿಸಿದ್ದಾರೆ.