ಉಡುಪಿ: ಸ್ನಾನಕ್ಕೆಂದು ಸಮುದ್ರಕ್ಕೆ ತೆರಳಿದ್ದ ಇಬ್ಬರು ನೀರು ಪಾಲಾಗಿರುವ ಘಟನೆ ನಡೆದಿದೆ.
ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಹೆಜಮಾಡಿ ಸಮುದ್ರ ತೀರದಲ್ಲಿ ಈ ಘಟನೆ ನಡೆದಿದೆ. ಎಳ್ಳಮಾವಾಸ್ಯೆ ಹಿನ್ನೆಲೆಯಲ್ಲಿ ಹೆಜಮಾಡಿ ಸಮುದ್ರಕ್ಕೆ ತೀರ್ಥ ಸ್ನಾನ ಮಾಡಲೆಂದು ತೆರಳಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ.
ಸಮುದ್ರಕ್ಕೆ ಈಜಲು ಒಟ್ಟು 6 ಜನರು ತೆರಳಿದ್ದರು. ಈ ವೇಳೆ ಇಬ್ಬರು ನೀರುಪಾಲಾಗಿದ್ದಾರೆ. ಕಾಪು ತಾಲೂಕಿನ ಹೆಜಮಾಡಿಯ ಅಕ್ಷಯ್ ಮತ್ತು ಅಮನ್ ನೀರುಪಾಲಾದ ದುರ್ದೈವಿಗಳು. ಸಮುದ್ರದಲ್ಲಿ ಮುಳುಗುತ್ತಿದ್ದ 6 ಜನರನ್ನು ರಕ್ಷಿಸಲು ಸ್ಥಳೀಯರು ಮುಂದಾಗಿದ್ದರು. ಈ ಪೈಕಿ ನಾಲ್ವರನ್ನು ರಕ್ಷಿಸಲಾಗಿದೆ.
ಸ್ಥಳೀಯರು ಕಾಪಾಡಿದ ನಾಲ್ವರು ಯುವಕರು ನೀರು ಕುಡಿದು ಅಸ್ವಸ್ಥರಾಗಿದ್ದರಿಂದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಪಡುಬಿದ್ರೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.