ಕೊಡಗು: ಜಿಲ್ಲೆಯಲ್ಲಿ ಜನಾಂಗೀಯ ಸಂಘರ್ಷ ತಾರಕಕ್ಕೇರಿದೆ. ದೇವಸ್ಥಾನವೊಂದರ ಉತ್ಸವ ಸಂದರ್ಭದಲ್ಲಿ ಧಾರ್ಮಿಕ ಉಡುಪು ಧರಿಸುವ ವಿಷಯವಾಗಿ ವಿವಾದ ಭುಗಿಲೆದ್ದಿದೆ. ಈ ಹಿನ್ನೆಲೆಯಲ್ಲಿ ಸ್ಥಳದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಪೊಲೀಸರು ಮೊಕ್ಕಾಂ ಹೂಡಿದ್ದಾರೆ.
ಮಡಿಕೇರಿ ತಾಲೂಕಿನ ಕಟ್ಟೆಮಾಡು ಗ್ರಾಮದಲ್ಲಿ ಪಾಳು ಬಿದ್ದಿದ್ದ ಪುರಾತನ ಮೃತ್ಯುಂಜಯ ದೇವಸ್ಥಾನವನ್ನು ಸಾಕಷ್ಟು ಖರ್ಚು ಮಾಡಿ 9 ವರ್ಷಗಳಿಂದ ಜೀರ್ಣೋದ್ಧಾರ ಮಾಡಲಾಗಿದೆ. ಕಳೆದ ವರ್ಷದಿಂದ ವಾರ್ಷಿಕ ಉತ್ಸವವನ್ನೂ ಆಚರಿಸಿಕೊಂಡು ಬರಲಾಗುತ್ತಿದೆ.
ಆದರೆ, ಊರಿನಲ್ಲಿ ಕೊಡವ, ಗೌಡ ಜನಾಂಗ ಸೇರಿದಂತೆ ಹತ್ತು ಹಲವು ಜನಾಂಗಳಿರುವುದರಿಂದ ಯಾವುದೇ ಒಂದು ಜನಾಂಗದ ಧಾರ್ಮಿಕ ಉಡುಪು ತೊಟ್ಟು ಬರುವುದನ್ನು ನಿಷೇಧಿಸಿ ದೇವಸ್ಥಾನದ ಬೈಲಾ ರಚನೆ ಮಾಡಲಾಗಿತ್ತು.
ಅದರಂತೆ ಡಿಸೆಂಬರ್ 23 ರಿಂದ ಬೇರೆ ಬಗೆಯ ಉತ್ಸವಗಳು ನಡೆದಿವೆ. ಉತ್ಸವದ ಕೊನೆಯ ದಿನ ಅಂದರೆ, ಡಿ. 27 ರಂದು ಸಂಜೆ ದೇವರು ಸ್ನಾನಕ್ಕೆ ಹೊರಡುವ ಸಂದರ್ಭದಲ್ಲಿ ಒಂದು ಜನಾಂಗಕ್ಕೆ ಸೇರಿದ ಹಲವರು ತಮ್ಮ ಸಾಂಪ್ರದಾಯಿಕ ಉಡುಪಿನಲ್ಲಿ ಆಗಮಿಸಿದ್ದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಲಾಗಿತ್ತು. ಹೀಗಿಗ ಎರಡು ಗುಂಪುಗಳ ಮಧ್ಯೆ ತೀವ್ರ ಚಕಮಕಿ ನಡೆದಿದೆ. ಈ ಹಿನ್ನೆಲೆಯಲ್ಲಿ ನಿಷೇಧಾಜ್ಞೆ ಜಾರಿಗೆ ತರಲಾಗಿದೆ.