ಬೆಂಗಳೂರು: 2023-24ನೇ ಸಾಲಿನ ಕೆಪಿಎಸ್ ಸಿ ಗೆಜೆಟೆಡ್ ಪ್ರೊಬೇಷನರ್ಸ್ ಪೂರ್ವಭಾವಿ ಪರೀಕ್ಷೆಯಲ್ಲಿ ಯಡವಟ್ಟಾಗಿದ್ದರಿಂದಾಗಿ ಅಭ್ಯರ್ಥಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಮತ್ತೊಮ್ಮೆ ಪರೀಕ್ಷೆ ನಡೆಸಲಾಗಿತ್ತು. ಈ ಸಂದರ್ಭದಲ್ಲೂ ಅವಾಂತರ ಬೆಳಕಿಗೆ ಬಂದಿದೆ ಎಂದು ವಿರೋಧ ಪಕ್ಷದ ನಾಯಕ ಆರ್ ಅಶೋಕ್ ವಾಗ್ದಾಳಿ ನಡೆಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ಭಾಷಾಂತರದಲ್ಲಿ ಲೋಪ ದೋಷ, OMR ಶೀಟ್ ಮತ್ತು ನೋಂದಣಿ ಸಂಖ್ಯೆ ಅದಲು ಬದಲು, ಕೆಲವೆಡೆಗಳಲ್ಲಿ 45 ನಿಮಿಷ ತಡವಾಗಿ ಪರೀಕ್ಷೆ ಆರಂಭ ಸೇರಿದಂತೆ ಸಾಕಷ್ಟು ಗೊಂದಲಗಳೇ ಸೃಷ್ಟಿಯಾಗಿವೆ. ಇದು ಅಭ್ಯರ್ಥಿಗಳ ಅಸಮಾಧಾನಕ್ಕೆ ತೊಂದರೆಯಾಗಿದೆ. ನಿನ್ನೆ ನಡೆದ ಪರೀಕ್ಷೆಯಿಂದಾಗಿ ವಿದ್ಯರ್ಥಿಗಳು ರೋಸಿ ಹೋಗಿದ್ದಾರೆ ಎಂದು ಅಸಮಾಧಾನ ಹೊರಹಾಕಿದ್ದಾರೆ.
ಮರು ಪರೀಕ್ಷೆಗೆ ನೋಂದಣಿ ಮಾಡಿಕೊಂಡ 2.109 ಲಕ್ಷ ಅಭ್ಯರ್ಥಿಗಳ ಪೈಕಿ ಕೇವಲ 1.005 ಲಕ್ಷ ಅಭ್ಯರ್ಥಿಗಳು ಹಾಜರಾಗಿದ್ದು, ಆಗಸ್ಟ್ ನಲ್ಲಿ ನಡೆದ ಪರೀಕ್ಷೆಯಲ್ಲಿ ಶೇ.62.52ರಷ್ಟಿದ್ದ ಹಾಜರಾತಿ, ಮರುಪರೇಕ್ಷೆಯಲ್ಲಿ ಶೇ.47.7ಕ್ಕೆ ಕುಸಿದಿದೆ. ಕಾಂಗ್ರೆಸ್ ಸರ್ಕಾರದ ಮೇಲೆ, ಕೆಪಿಎಸ್ ಸಿ ಮೇಲೆ ನಂಬಿಕೆ ಕಳೆದುಕೊಂಡಿರುವುದರಿಂದಲೇ ಅಭ್ಯರ್ಥಿಗಳು ಪರೀಕ್ಷೆಯಿಂದ ಹಿಂದೆ ಸರಿದಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತಮ್ಮ ಸರ್ಕಾರದ ರಾಜಕೀಯ ಹಸ್ತಕ್ಷೇಪ, ಭ್ರಷ್ಟಾಚಾರ, ಸ್ವಜನಪಕ್ಷಪಾತವೆ ಕೆಪಿಎಸ್ ಸಿ ಪರೀಕ್ಷೆಗಳಲ್ಲಿನ ಪದೇ ಪದೇ ಎಡವಟ್ಟಿಗೆ ಕಾರಣ. ಆಗಸ್ಟ್ ನಲ್ಲಿ ನಡೆದ ಪೂರ್ವಭಾವಿ ಪರೀಕ್ಷೆಗೆ 13.40 ಕೋಟಿ ರೂ. ವೆಚ್ಚವಾಗಿತ್ತು. ಮರುಪರೀಕ್ಷೆಗೂ ಅಷ್ಟೇ ಮೊತ್ತ ಅಥವಾ ಅದಕ್ಕಿಂತ ಹೆಚ್ಚು ಖರ್ಚಾಗಿರುತ್ತದೆ. ಗೋಪ್ಯತೆ ಕಾಪಾಡಲು 5.3 ಕೋಟಿ ರೂ. ವೆಚ್ಚ ಮಾಡಲಾಗಿದೆ ಎಂದು ಅಂದಾಜಿಸಲಾಗಿದೆ. ಇಷ್ಟಾದರೂ ಈ ಪರಿ ಎಡವಟ್ಟುಗಳು ಮರುಕಳಿಸಿದೆ ಎಂದರೆ ಇದಕ್ಕೆ ಯಾರು ಹೊಣೆ? ಸಾರ್ವಜನಿಕರ ತೆರಿಗೆ ಹಣವನ್ನ ಹೀಗೆ ಪೋಲು ಮಾಡುವುದು ಯಾವ ನ್ಯಾಯ?ಎಂದು ಪ್ರಶ್ನಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಆಗಸ್ಟ್ ನಲ್ಲಿ ನಡೆದ ಪೂರ್ವಭಾವಿ ಪರೀಕ್ಷೆಯ ಎಡವಟ್ಟುಗಳಿಗೆ, ಲೋಪ ದೋಷಗಳಿಗೆ ಕಾರಣರಾದ ಪರೀಕ್ಷಾ ನಿಯಂತ್ರಕರ ಮೇಲೆ ಯಾವುದೇ ಕ್ರಮ ಕೈಗೊಳ್ಳದೆ ಅದೇ ಹುದ್ದೆಯಲ್ಲಿ ಮುಂದುವರೆಸಿದ್ದೀರಿ. ಕಾರ್ಯದರ್ಶಿಗಳನ್ನು ಮಾತ್ರ ಎತ್ತಂಗಡಿ ಮಾಡಿದ್ದೀರಿ. ಭ್ರಷ್ಟಾಚಾರವೇ ಈ ಯಡವಟ್ಟುಗಳಿಗೆ ಕಾರಣ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಭ್ಯರ್ಥಿಗಳ ಹಿತದೃಷ್ಟಿಯಿಂದ, ಆಡಳಿತದ ಹಿತದೃಷ್ಟಿಯಿಂದ ಇನ್ನಾದರೂ ಸರ್ಕಾರ ಎಚ್ಚೆತ್ತುಕೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.