ಕಲಬುರಗಿ: “ಅತ್ತೆಯ ಮನೆಯಲ್ಲಿ ಮುತ್ತಾಗಿ ಇರಬೇಕು. ಹೊತ್ತಾಗಿ ನೀಡಿದರೂ ಉಣಬೇಕು ಮಗಳೇ, ತವರಿಗೆ ಹೆಸರ ತರಬೇಕು” ಎಂದು ಹಿಂದೆ ಮಕ್ಕಳನ್ನು ಮದುವೆ ಮಾಡಿ ಕೊಡುವಾಗ ತಂದೆ- ತಾಯಿ ಬುದ್ಧಿಯ ಮಾತು ಹೇಳಿ ಕಳುಹಿಸುತ್ತಿದ್ದರು. ಅಂದರೆ, ಅತ್ತೆ-ಮಾವನನ್ನೂ ತನ್ನ ತಂದೆ-ತಾಯಿ ರೀತಿ ಭಾವಿಸಿ ಪೂಜಿಸಬೇಕು ಎನ್ನುವುದು ಆಶಯವಾಗಿತ್ತು. ಆದರೆ, ಆಧುನಿಕ ಜಗತ್ತಿನಲ್ಲಿ ಅತ್ತೆ- ಮಾವ ಕಳೆದು ಹೋಗುತ್ತಿದ್ದಾರೆ ಎಂಬ ಆತಂಕ ಹಲವು ವರ್ಷಗಳಿಂದಲೂ ಇದೆ. ಈಗ ಇದಕ್ಕೆ ಪುಷ್ಠಿ ನೀಡುವಂತಹ ಘಟನೆಯೊಂದು ನಡೆದಿದೆ.
ಇಲ್ಲೊಬ್ಬಳು ಸೊಸೆ ತನ್ನ ಅತ್ತೆ ಸಾಯಲಿ ಎಂದು ಹರಕೆ ಹೊತ್ತಿದ್ದಾಳೆ. ಕಲಬುರಗಿ ಜಿಲ್ಲೆಯ ಅಫಜಲಪುರ ತಾಲ್ಲೂಕಿನ ಘತ್ತರಗಿ ಗ್ರಾಮದ ಭಾಗ್ಯವಂತಿ ದೇವಿಯ ಹುಂಡಿಗೆ 20 ರೂ. ನೋಟು ಹಾಕಲಾಗಿದೆ. ಈ ನೋಟಿನಲ್ಲಿ ಸೊಸೆಯೊಬ್ಬಳು ಹರಕೆ ಹೊತ್ತಿದ್ದು, ಅದನ್ನು ಕಂಡು ಎಲ್ಲರೂ ಶಾಕ್ ಗೆ ಒಳಗಾಗಿದ್ದಾರೆ.
ತಾಯಿ “ನಮ್ಮ ಅತ್ತೆ ಬೇಗ ಸಾಯಬೇಕು’’ ತಾಯಿ!!! ಅಂತಾ 20 ರೂ ನೋಟಿನ ಮೇಲೆ ಬರೆದು ಸೊಸೆ ಕಾಣಿಕೆ ಹುಂಡಿಗೆ ಹಾಕಿದ್ದಾಳೆ. ಭಾಗ್ಯವಂತಿ ದೇವಿಯ ಹುಂಡಿ ಎಣಿಕೆ ಮಾಡುವ ಸಂದರ್ಭದಲ್ಲಿ ಈ ಹರಕೆಯ ನೋಟು ಪತ್ತೆಯಾಗಿದೆ.
ಪ್ರತಿ ವರ್ಷ ಕಾಣಿಕೆ ಹುಂಡಿ ತೆರೆದು ಭಕ್ತರ ಕಾಣಿಕೆಯ ಎಣಿಕೆ ಮಾಡಲಾಗುತ್ತದೆ. ಈ ಸಂದರ್ಭದಲ್ಲಿ 60 ಲಕ್ಷ ನಗದು ಒಂದು ಕೆಜಿ ಬೆಳ್ಳಿ , 200 ಗ್ರಾಂ ಚಿನ್ನಾಭರಣ , ಹುಂಡಿಯಲ್ಲಿ ಹುಂಡಿಗೆ ಜಮಾ ಆಗಿದೆ. ಆದರೆ, ಸೊಸೆಯ ಬೇಡಿಕೆ ಕಂಡು ಜನರು ಅಚ್ಚರಿ ಪಡುತ್ತಿದ್ದಾರೆ.