ಕಿಚ್ಚ ಸುದೀಪ್ ಅಭಿನಯದ ‘ಮ್ಯಾಕ್ಸ್’ ಸಿನಿಮಾ ಬಿಡುಗಡೆ ಆಗಿ ಎರಡು ದಿನ ಕಳೆದಿದ್ದು, ಬಾಕ್ಸ್ ಆಫೀಸ್ ನಲ್ಲಿ ಸದ್ದು ಮಾಡುತ್ತಿದೆ.
‘ಮ್ಯಾಕ್ಸ್’ ಸಿನಿಮಾ ಮೊದಲ ದಿನ ಭರ್ಜರಿ ಕಲೆಕ್ಷನ್ ಮಾಡಿದ್ದು, 8.50 ಕೋಟಿ ರೂ. ಗಳಿಕೆ ಮಾಡಿತ್ತು. ಆ ಮೂಲಕ ಈ ವರ್ಷ ಮೊದಲ ದಿನ ಅತಿ ಹೆಚ್ಚು ಹಣ ಗಳಿಕೆ ಮಾಡಿದ ಸಿನಿಮಾ ಎನಿಸಿಕೊಂಡಿತ್ತು. ಮೊದಲ ದಿನ ಹೆಚ್ಚು ಗಳಿಕೆ ಕಂಡಿದ್ದಕ್ಕೆ ಎರಡನೇ ದಿನವೂ ಅದೇ ನಿರೀಕ್ಷೆ ಇಡಲಾಗಿತ್ತು.
‘ಮ್ಯಾಕ್ಸ್’ ಸಿನಿಮಾ ಎರಡನೇ ದಿನ ಗುರುವಾರ 4 ಕೋಟಿ ರೂ. ಕಲೆಕ್ಷನ್ ಮಾಡಿದೆ ಎಂದು ತಿಳಿದು ಬಂದಿದೆ. ಕ್ರಿಸ್ ಮಸ್ ರಜೆಯ ದಿನವಾದ ಬುಧವಾರದಂದು ‘ಮ್ಯಾಕ್ಸ್’ ಸಿನಿಮಾ ಬಿಡುಗಡೆ ಆಗಿತ್ತು. ಗುರುವಾರ ಯಾವುದೇ ರಜೆ ಇಲ್ಲದ ದಿನವಾಗಿದ್ದರೂ ‘ಮ್ಯಾಕ್ಸ್’ ಸಿನಿಮಾ 4 ಕೊಟಿ ರೂ.ಗೂ ಹೆಚ್ಚು ಹಣ ಗಳಿಸಿರುವುದು ತಂಡಕ್ಕೆ ಸಂತಸ ತಂದು ಕೊಟ್ಟಿದೆ.
ಈ ಮೂಲಕ ಸಿನಿಮಾದ ಒಟ್ಟು ಕಲೆಕ್ಷನ್ 12.50 ಕೋಟಿ ರೂ.ಗೂ ಹೆಚ್ಚಾಗಿದೆ. ಮೊದಲ ದಿನಕ್ಕೆ ಹೋಲಿಕೆ ಮಾಡಿದರೆ ಬೆಂಗಳೂರು ಸೇರಿದಂತೆ ಕೆಲವು ಪ್ರಮುಖ ನಗರಗಳಲ್ಲಿ ಶೋಗಳ ಸಂಖ್ಯೆ ಕಡಿಮೆಯಾಗಿರುವುದು ಕೂಡ ಕಲೆಕ್ಷನ್ ತಗ್ಗಲು ಕಾರಣ ಎನ್ನಲಾಗುತ್ತಿದೆ. ‘ಪುಷ್ಪ 2’, ‘ವಿಡುದಲೈ 2’ ಸಿನಿಮಾಗಳ ಅಬ್ಬರ ಇನ್ನೂ ತಗ್ಗಿಲ್ಲ ಅದರ ನಡುವೆಯೂ ಸಹ ‘ಮ್ಯಾಕ್ಸ್’ ಸಿನಿಮಾ ಬಹಳ ಒಳ್ಳೆಯ ಕಲೆಕ್ಷನ ಮಾಡುತ್ತಿದೆ.