ಹುಬ್ಬಳ್ಳಿ: ನಗರದಲ್ಲಿ ನಡೆದಿದ್ದ ಸಿಲಿಂಡರ್ ಸ್ಫೋಟ ಪ್ರಕರಣದಲ್ಲಿ ಮತ್ತೋರ್ವ ಅಯ್ಯಪ್ಪ ಮಾಲಾಧಾರಿ ಸಾವನ್ನಪ್ಪಿದ್ದಾರೆ.
ಮಲಗಿದ್ದ ವೇಳೆ ಸಿಲಿಂಡರ್ ಸ್ಫೋಟಗೊಂಡ ಪರಿಣಾಮ 9 ಜನ ಮಾಲಾಧಾರಿಗಳು ಗಂಭೀರವಾಗಿ ಗಾಯಗೊಂಡಿದ್ದರು. ಕೂಡಲೇ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಗುರುವಾರವಷ್ಟೇ ಇಬ್ಬರು ಮಾಲಾಧಾರಿಗಳು ಸಾವನ್ನಪ್ಪಿದ್ದರು. ಈಗ ಮತ್ತೋರ್ವ ಮಾಲಾಧಾರಿ ಸಾವನ್ನಪ್ಪಿದ್ದಾರೆ. ರಾಜು ಮೂಗೇರಿ (16) ಮೃತ ದುರ್ದೈವಿ. ಈ ಮೂಲಕ ಮೃತರ ಸಂಖ್ಯೆ 3ಕ್ಕೆ ಏರಿಕೆಯಾಗಿದೆ.
ಡಿ. 22ರಂದು ಉಣಕಲ್ ನಲ್ಲಿನ ಸಾಯಿನಗರದ ಈಶ್ವರ ದೇವಸ್ಥಾನದಲ್ಲಿ ಸಿಲಿಂಡರ್ ಸ್ಫೋಟಗೊಂಡು 9 ಜನ ಅಯ್ಯಪ್ಪ ಮಾಲಾಧಿಕಾರಿಗಳು ಗಾಯಗೊಂಡಿದ್ದರು. 9 ಜನರನ್ನು ಕಿಮ್ಸ್ ಗೆ ದಾಖಲಿಸಲಾಗಿತ್ತು. ಗಾಯಾಳುಗಳಿಗೆ ಬೆಂಗಳೂರಿನ ತಜ್ಞ ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ. ಗುರುವಾರ ಚಿಕಿತ್ಸೆ ಫಲಿಸದೆ ಇಬ್ಬರು ಸಾವನ್ನಪ್ಪಿದ್ದರು. 58 ವರ್ಷದ ನಿಜಲಿಂಗಪ್ಪ ಬೇಪುರಿ, 18 ವರ್ಷದ ಸಂಜಯ್ ಸವದತ್ತಿ, 16 ವರ್ಷದ ರಾಜು ಮೂಗೇರಿ ಪ್ರಕರಣದಲ್ಲಿ ಬಲಿಯಾಗಿರುವ ಮೂವರು ದುರ್ದೈವಿಗಳಾಗಿದ್ದಾರೆ.
ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಅಚ್ಚವ್ವನ ಕಾಲೋನಿಯ ಸನ್ನಿಧಿಯಲ್ಲಿ ಒಟ್ಟು 14 ಜನ ಮಾಲಾಧಾರಿಗಳಿದ್ದರು. ಅದರ ಪೈಕಿ ಸನ್ನಿಧಿಯ ಮೇಲಿನ ಕೋಣೆಯಲ್ಲಿ 9 ಜನ ಇದ್ದರು, ಕೆಳಗೆ 5 ಜನ ಇದ್ದರು. ಐವರು ಸೇಫ್ ಆಗಿದ್ದರು. ಆದರೆ, ಈಗ ಆ ಐವರು ನೊಂದು ಮಾಲೆ ತೆಗೆದಿದ್ದಾರೆ.