ಮುನಿರತ್ನಗೆ ಮೊಟ್ಟೆ ಹೊಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ನಿರ್ಮಾಪಕ ಲಗ್ಗೆರೆ ನಾರಾಯಣ ಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೊಟ್ಟೆ ಕಾರ್ಯಕ್ರಮದ ಡೈರೆಕ್ಟರ್, ಪ್ರೊಡ್ಯೂಸರ್ ಹಾಗೂ ಆ್ಯಕ್ಟರ್ ಸಹ ಮುನಿರತ್ನ ಆಗಿದ್ದರು. ನಿನ್ನೆ ಕಾರ್ಯಕ್ರಮ ವಿರೋಧಿಸುವುದಕ್ಕೆ ನಮ್ಮ ಸಮುದಾಯದ ಮಹಿಳೆಯರೂ ಹೋಗಿದ್ದರು. ಆದರೆ, ಅವರನ್ನು ಪೊಲೀಸರು ಮರಳಿ ಕಳುಹಿಸಿದ್ದರು. ಆದಾದ ನಂತರ ಮುನಿರತ್ನ ಕಾರ್ಯಕ್ರಮ ಮುಗಿಸಿ ಹೋಗುತ್ತಿದ್ದಾಗ ತಲೆಗೆ ಮೊಟ್ಟೆ ಬಿದ್ದಿದೆ.
ಆ್ಯಸಿಡ್ ಆ್ಯಸಿಡ್ ಅಂತ ಹೇಳಿದ ಕೂಡಲೆ ಮೊಟ್ಟೆ ಬಿದ್ದಿದೆ. ಅವರ ತಲೆಗೆ ಮೊಟ್ಟೆ ಬಿದ್ದಿದ್ದು ಮುಂಭಾಗದಲ್ಲಿ. ಆದರೆ, ಮುನಿರತ್ನ ನನ್ನ ತಲೆಯ ಹಿಂಭಾಗಕ್ಕೆ ಬಲವಾದ ಪೆಟ್ಟು ಬಿದ್ದಿದೆ ಅಂತ ಹೇಳಿದ್ದಾರೆ. ಹೀಗಾಗಿ ಸಿಟಿ ಸ್ಕ್ಯಾನ್ ಮಾಡಿಸಬೇಕು. ತಲೆಗೆ ಮೊಟ್ಟೆ ಬಿದ್ದಿದ್ದಕ್ಕೆ ಮುನಿರತ್ನ ಕೆಸಿ ಜನರಲ್ ಹೆರಿಗೆ ಆಸ್ಪತ್ರೆಗೆ ಹೋಗಿ ಅಡ್ಮಿಟ್ ಆಗಿದ್ದಾರೆ.
ಅಲ್ಲದೇ, ಆಸಿಡ್ ದಾಳಿಯಾಗಿದೆ ಎಂದು ಆರೋಪಿಸುತ್ತಾರೆ. ಒಂದು ವೇಳೆ ಆಸಿಡ್ ದಾಳಿಯಾಗಿದ್ದರೆ ಮುನಿರತ್ನ ಜೊತೆಗೆ ಸಾಕಷ್ಟು ಜನ ಇದ್ದರು. ಪೊಲೀಸ್ ಅಧಿಕಾರಿಗಳು ಇದ್ದರು. ಆದರೆ, ಅವರಿಗೆ ಯಾಕೆ ಆಸಿಡ್ ಏನೂ ಮಾಡಿಲ್ಲ ಎಂದು ಪ್ರಶ್ನಿಸಿದ್ದಾರೆ.
ಮುನಿರತ್ನ ನಮ್ಮ ಜನಾಂಗದ ಮಹಿಳೆಯರ ಬಗ್ಗೆ, ತಾಯಂದಿರ ಬಗ್ಗೆ ಕೆಟ್ಟದ್ದಾಗಿ ಮಾತನಾಡಿದ್ದಾರೆ. ನಾವು ನೇರವಾಗಿ ಹೋರಾಟ ಮಾಡುತ್ತೇವೆ. ಮೊಟ್ಟೆ ಹೊಡೆಯಬೇಕಿಲ್ಲ. ನಮ್ಮ ತಾಯಂದಿರ ಬಗ್ಗೆ ಮಾತನಾಡಿದರೆ ಸುಮ್ಮನೆ ಬಿಡಬೇಕಾ? ಎಂದು ಪ್ರಶ್ನಿಸಿದ್ದಾರೆ.
ಅಶೋಕ್ , ಸಿಟಿ ರವಿ, ಕುಮಾರಸ್ವಾಮಿ ವಕ್ಕಲಿಗರು ಅಲ್ವಾ? ಅವರು ಯಾಕೆ ಮೌನ ವಹಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು, ನಾನೇನಾದರೂ ಒಕ್ಕಲಿಗ ಹೆಣ್ಣು ಮಕ್ಕಳನ್ನು ಬೈದಿದ್ದರೆ, ದಲಿತರನ್ನು ನಿಂದಿಸಿದ್ದರೆ ರಕ್ತ ಕಾರಿ ಸಾಯಲಿ. ಅಂದಿದ್ದು ಸತ್ಯ ಆದರೆ ರಾಜೀನಾಮೆ ನೀಡುತ್ತೇನೆ ಅಂದಿದ್ದರಲ್ಲ. ಯಾಕೆ ರಾಜೀನಾಮೆ ನೀಡಿಲ್ಲ ಎಂದು ಪ್ರಶ್ನಿಸಿದ್ದಾರೆ.
ಒಂದು ವೇಳೆ ಆಸಿಡ್ ದಾಳಿಯಾಗಿದ್ದರೆ, ಅಕ್ಕ ಪಕ್ಕದವರ ಕೈಕಾಲುಗಳು ಸಹ ಸುಟ್ಟು ಹೋಗಬೇಕಿತ್ತು. ಅವರೇ ಮೊಟ್ಟೆ ಹೊಡೆಸಿಕೊಂಡು ನಮ್ಮ ತಲೆಗೆ ಕಟ್ಟುತ್ತಿದ್ದಾರೆ. ಅಮಾಯಕ ದಲಿತ ಹುಡುಗನ ಕಾರು ಒಡೆದು ಹಾಕಿದ್ದಾರೆ. ಮುನಿರತ್ನ ಅನುಕಂಪ ಗಿಟ್ಟಿಸಿಕೊಳ್ಳುವುದಕ್ಕಾಗಿ ಈ ರೀತಿ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.