ಬೆಂಗಳೂರು: ಸಿ.ಟಿ. ರವಿ ಅಶ್ಲೀಲ ಪದ ಬಳಕೆ ಮಾಡಿದ್ದಾರೆಂದು ವಿಡಿಯೋ ಬಿಡುಗಡೆ ಮಾಡಿರುವ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಪ್ರಧಾನಿ ಹಾಗೂ ರಾಷ್ಟ್ರಪತಿಗೆ ದೂರು ನೀಡುವುದಾಗಿ ಹೇಳಿದ್ದಾರೆ. ಈ ಮಧ್ಯೆ ಸಿ.ಟಿ. ರವಿ ಕೂಡ ದೂರು ನೀಡಿದ್ದಾರೆ.
ಈಗಾಗಲೇ ಸಿ.ಟಿ. ರವಿ ಪ್ರಕರಣವನ್ನು ಸರ್ಕಾರವು ಸಿಐಡಿಗೆ ತನಿಖೆಗೆ ನೀಡಿದೆ. ಈ ಬೆನ್ನಲ್ಲೇ ಸಿಟಿ ರವಿ ಸರ್ಕಾರ ಮತ್ತು ಪೊಲೀಸರ ವಿರುದ್ಧ ಕಿಡಿಕಾರಿದ್ದು, ಸುವರ್ಣ ಸೌಧದಿಂದ ಬಂಧನವಾಗಿ ಬಿಡುಗಡೆವರೆಗೂ ನಡೆದ ಘಟನೆಯ ಬಗ್ಗೆ ಸಿಟಿ ರವಿ ಹೋರಾಟಕ್ಕೆ ಮುಂದಾಗಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಸಿ.ಟಿ ಅವರು ಸಭಾಪತಿ ಬಸವರಾಜ್ ಹೊರಟ್ಟಿ, ಗೃಹ ಸಚಿವ ಡಾ.ಜಿ ಪರಮೇಶ್ವರ್ ಹಾಗೂ ಪೊಲೀಸ್ ಮಹಾ ನಿರೀಕ್ಷಕರಿಗೆ 7 ಪುಟಗಳ ದೂರು ನೀಡಿದ್ದಾರೆ.
ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್, ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್, ಪರಿಷತ್ ಸದಸ್ಯ ಬೋಸರಾಜ್ ಸೇರಿದಂತೆ ಹಲವರು ತನ್ನ ವಿರುದ್ಧ ಅವಾಚ್ಯ ಪದ ಬಳಕೆ ಮಾಡಿದ್ದಲ್ಲದೇ ಜೀವ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಪೊಲೀಸರಿಂದ ಹಕ್ಕು ಚ್ಯುತಿ ಆಗಿರುವ ಬಗ್ಗೆಯೂ ಉಲ್ಲೇಖ ಮಾಡಿದ್ದು, ಜೀವ ಬೆದರಿಕೆ, ಮಾನಹಾನಿಯಾಗಿದೆ. ಸಚಿವರ ಬೆಂಬಲಿಗರಿಂದ ಹಲ್ಲೆ ಯತ್ನ ನಡೆದ ಬಗ್ಗೆಯೂ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.