ಬೆಂಗಳೂರು: ಸಿಎಂ ಸಿದ್ದರಾಮಯ್ಯ ಅವರು ಕರ್ನಾಟಕದ ಕ್ರೀಡಾಕೂಟದ ಲಾಂಛನ ಬಿಡುಗಡೆ ಮಾಡಿದ್ದಾರೆ.
ಜ. 17ರಿಂದ 23ರವರೆಗೆ ಮಂಗಳೂರು ಮತ್ತು ಉಡುಪಿ ಜಿಲ್ಲೆಗಳಲ್ಲಿ ನಡೆಯಲಿರುವ ಕ್ರೀಡಾಕೂಟದ ಲಾಂಛನ ಬಿಡುಗಡೆ ಮಾಡಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಸಿಎಂ, ಕ್ರೀಡಾಕೂಟದ ಲೋಗೋದಲ್ಲಿನ ಯಕ್ಷಗಾನ ಕಿರೀಟವು ಕ್ರೀಡಾಕೂಟ ನಡೆಯುವ ಕರಾವಳಿ ಭಾಗದ ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು, ತಿಳಿನೀಲಿ ಬಣ್ಣವು ಕಡಲಿನ ಅಗಾಧತೆಯನ್ನು, ಜತೆಗೆ ಸೋಲು- ಗೆಲುವುಗಳಲ್ಲಿ ಕ್ರೀಡಾಪಟುಗಳ ಶಾಂತತೆ ಮತ್ತು ಶ್ರಮವನ್ನು ಪ್ರತಿನಿಧಿಸುವ ಈ ಲೋಗೋ ಅರ್ಥಪೂರ್ಣವಾಗಿದೆ ಎಂದು ಬರೆದು ಬರೆದುಕೊಂಡಿದ್ದಾರೆ.
ಮಂಗಳೂರು ಹಾಗೂ ಉಡುಪಿ ಜಿಲ್ಲಾಡಳಿತವು ಕ್ರೀಡಾಕೂಟದ ವ್ಯವಸ್ಥಿತ ಆಯೋಜನೆ ಸಂಬಂಧ ಅಗತ್ಯ ಕ್ರಮಕೈಗೊಳ್ಳಬೇಕು ಎಂದು ಸಿಎಂ ಸೂಚಿಸಿದ್ದಾರೆ. ಕ್ರೀಡಾಕೂಟದ ಉದ್ಘಾಟನಾ ಕಾರ್ಯಕ್ರಮ ಜನವರಿ 17ರಂದು ಮಂಗಳೂರಿನಲ್ಲಿ, ಸಮಾರೋಪ ಸಮಾರಂಭ ಉಡುಪಿ ಜಿಲ್ಲೆಯಲ್ಲಿ ನಡೆಯಲಿದೆ. ಸುಮಾರು 25 ವಿವಿಧ ಕ್ರೀಡಾ ಸ್ಪರ್ಧೆಗಳನ್ನು ಆಯೋಜಿಸುತ್ತಿದ್ದು, ಕ್ರೀಡಾಕೂಟದ ಯಶಸ್ವಿ ಆಯೋಜನೆಗಾಗಿ ಅಧಿಕಾರಿಗಳಿಗೆ ಸಿಎಂ ಸೂಚಿಸಿದ್ದಾರೆ.
ಮಂಗಳೂರಿನಲ್ಲಿ 12 ಕ್ರೀಡೆಗಳು ಹಾಗೂ ಉಡುಪಿ ಮತ್ತು ಮಣಿಪಾಲಗಳಲ್ಲಿ 11 ಕ್ರೀಡೆಗಳು ಆಯೋಜನೆಗೊಳ್ಳಲ್ಲಿದ್ದು, ಶೂಟಿಂಗ್ ಮತ್ತು ಜಿಮ್ನಾಸ್ಟಿಕ್ ಕ್ರೀಡೆಗಳನ್ನು ಬೆಂಗಳೂರಿನಲ್ಲಿ ಆಯೋಜಿಸಲಾಗುತ್ತಿದೆ.