ನವದೆಹಲಿ: 5 ಮತ್ತು 8ನೇ ತರಗತಿ ಪರೀಕ್ಷೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ (Union Government) ಮಹತ್ವದ ನಿರ್ಧಾರ ಘೋಷಿಸಿದೆ.
ಉಚಿತ ಮತ್ತು ಕಡ್ಡಾಯ ಶಿಕ್ಷಣದ ಮಕ್ಕಳ ಹಕ್ಕು (RTE) ಕಾಯ್ದೆ ನಿಯಮಗಳು – 2010 ಕ್ಕೆ ಕೇಂದ್ರ ಸರ್ಕಾರ ತಿದ್ದುಪಡಿ ಮಾಡಿದೆ. ಹೊಸ ನಿಯಮಗಳಂತೆ, 5 ಮತ್ತು 8 ನೇ ತರಗತಿ ವಿದ್ಯಾರ್ಥಿಗಳಿಗೆ ನಿಯಮಿತವಾಗಿ ಪರೀಕ್ಷೆಗಳನ್ನು ನಡೆಸುವ ಅಧಿಕಾರವನ್ನು ಕೇಂದ್ರ ಸರ್ಕಾರ ರಾಜ್ಯ ಸರ್ಕಾರಗಳಿಗೆ ನೀಡಿದೆ. ಒಂದು ವೇಳೆ ಅವರು ಫೇಲ್ ಆದರೆ, ಅದೇ ತರಗತಿಯಲ್ಲಿ ಮುಂದುವರಿಯಬೇಕಾಗುತ್ತದೆ.
ವಿದ್ಯಾರ್ಥಿ 5 ಮತ್ತು 8 ನೇ ತರಗತಿಯಲ್ಲಿ ಫೇಲ್ (Fail) ಆದರೆ ಫಲಿತಾಂಶ ಪ್ರಕಟವಾದ 2 ತಿಂಗಳ ಒಳಗಡೆ ಮತ್ತೊಮ್ಮೆ ಪರೀಕ್ಷೆ (Exam) ಬರೆಯಬೇಕಾಗುತ್ತದೆ. ಅದರಲ್ಲೂ ಫೇಲ್ ಆದರೆ, ಮತ್ತೆ ಅದೇ ತರಗತಿಯಲ್ಲಿ ಮುಂದುವರೆಯಬೇಕಾಗುತ್ತದೆ. ಆದರೆ ಪ್ರಾಥಮಿಕ ಶಿಕ್ಷಣವನ್ನು ಪೂರ್ಣಗೊಳಿಸುವವರೆಗೆ ವಿದ್ಯಾರ್ಥಿಯನ್ನು ಶಾಲೆಗಳು ಹೊರಗೆ ಹಾಕುವಂತಿಲ್ಲ ಎಂದು ಶಿಕ್ಷಣ ಸಚಿವಾಲಯ ಪ್ರಕಟಿಸಿದ ಅಧಿಸೂಚನೆ ತಿಳಿಸಿದೆ.
ಸದ್ಯಕ್ಕೆ ಈ ಅಧಿಸೂಚನೆಯು ಕೇಂದ್ರೀಯ ವಿದ್ಯಾಲಯ, ನವೋದಯ ವಿದ್ಯಾಲಯ, ಮತ್ತು ಸೈನಿಕ ಶಾಲೆಗಳು ಸೇರಿದಂತೆ ಕೇಂದ್ರ ಸರ್ಕಾರವು ನಡೆಸುತ್ತಿರುವ 3 ಸಾವಿರಕ್ಕೂ ಅಧಿಕ ಶಾಲೆಗಳಿಗೆ ಅನ್ವಯಿಸುತ್ತದೆ.