ಬೆಂಗಳೂರು : ಕ್ರಿಸ್ಮಸ್ ಹಾಗೂ ಹೊಸ ವರ್ಷಾಚರಣೆಯ ಹಿನ್ನೆಲೆಯಲ್ಲಿ ಯಾವುದೇ ಅನಾಹುತ ಸಂಭವಿಸಿದಂತೆ ಅಗತ್ಯ ಮುಂಜಾಗ್ರತಾ ಕ್ರಮ ವಹಿಸಬೇಕೆಂದು ಗೃಹ ಸಚಿವ ಡಾ. ಜಿ.ಪರಮೇಶ್ವರ ಸೂಚಿಸಿದ್ದಾರೆ.
ನಗರ ಪೊಲೀಸ್ ಆಯುಕ್ತ ಕಚೇರಿಯಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ಕಳೆದ ವರ್ಷ ಅಚ್ಚುಕಟ್ಟಾಗಿ ಬಂದೋಬಸ್ತ್ ವ್ಯವಸ್ಥೆ ಕೈಗೊಂಡು ಕ್ರಿಸ್ಮಸ್ ಹಾಗೂ ಹೊಸ ವರ್ಷ ಆಚರಣೆಗೆ ಕ್ರಮ ವಹಿಸಲಾಗಿತ್ತು. ಹೊಸ ವರ್ಷ ಆಚರಣೆಗೆ 7 ಲಕ್ಷ ಜನ ಸೇರುವ ಸಾಧ್ಯತೆ ಇದ್ದು, ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ ಎಂದು ಹೇಳಿದ್ದಾರೆ. ಮೆಟ್ರೋ ವ್ಯವಸ್ಥೆ, ಓಲಾ, ಊಬರ್ ಮುಂತಾದ ವ್ಯವಸ್ಥೆ ಬಗ್ಗೆ ಪರಿಶೀಲಿಸಲಾಗಿದೆ. ಬೆಂಗಳೂರು ಸಿಟಿ ವಿಶ್ವದ ಗಮನ ಸೆಳೆಯುವ ನಗರವಾಗಿರುವುದರಿಂದ ಜವಾಬ್ದಾರಿಯಿಂದ ಬಂದೋಬಸ್ತ್ ಕೈಗೊಳ್ಳಬೇಕೆಂದು ಪೊಲೀಸರಿಗೆ ತಾಕೀತು ಮಾಡಿದ್ದಾರೆ.
ಮಹಿಳಾ ಸುರಕ್ಷತೆಗೆ ಹೆಚ್ಚಿನ ಒತ್ತು ನೀಡಬೇಕು. ಸಣ್ಣ ಪುಟ್ಟ ಅನಾಹುತಗಳು ಸಂಭವಿಸದಂತೆ ಎಚ್ಚರಿಕೆ ವಹಿಸಬೇಕಿದೆ. ಹೊಸ ವರ್ಷ ಆಚರಿಸುವವರಿಗೆ ಆಡಚಣೆ ಮಾಡುವುದು ಬೇಡ. ಅವರಿಗೆ ಸುರಕ್ಷತೆ ನೀಡಬೇಕು. ತೊಂದರೆ ಉಂಟು ಮಾಡುವ ಕಿಡಿಗೇಡಿಗಳ ಮೇಲೆ ನಿಗಾ ಇಡಬೇಕು ಎಂದು ಸೂಚಿಸಿದ್ದಾರೆ.
ಬಂದೋಬಸ್ತ್ ಹಿನ್ನಲೆಯಲ್ಲಿ ನಗರದ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ರಜೆ ನೀಡುವುದು ಬೇಡ. ಅಗತ್ಯತೆ ಮತ್ತು ಅನಿವಾರ್ಯತೆ ಇದ್ದವರಿಗೆ ರಜೆ ನೀಡಬೇಕೆಂದು ಸೂಚಿಸಿದ್ದಾರೆ.
ಬಿಬಿಎಂಪಿ, ಬಿಎಂಟಿಸಿ ಬಿಎಂಆರ್‌ಸಿಎಲ್, ಆರೋಗ್ಯ ಮತ್ತು ಅಗ್ನಿಶಾಮಕ ಇಲಾಖೆಯ ನೆರವು ಪಡೆದುಕೊಳ್ಳಬೇಕು. ಅಗ್ನಿ ಅವಘಡಗಳು ಸಂಭವಿಸದಂತೆ ಮುನ್ನಚ್ಚರಿಕೆ ವಹಿಸಬೇಕು. ಡ್ರಂಕ್ ಆ್ಯಂಡ್ ಡ್ರೈವ್, ಬೈಕ್ ವ್ಹೀಲಿಂಗ್ ಮಾಡುವ ಕಿಡಿಗೇಡಿಗಳು ಹಾಗೂ ಹಳೇ ಪ್ರಕರಣಗಳ ಆರೋಪಿಗಳ ಮೇಲೆ ನಿಗಾ ಇರಿಸಬೇಕು ಎಂದು ಸೂಚಿಸಿದ್ದಾರೆ.