ಬೆಂಗಳೂರು: ರಾಜ್ಯ ಸೇರಿದಂತೆ ರಾಷ್ಟ್ರದಲ್ಲಿ ಇತ್ತೀಚೆಗೆ ಹುಸಿ ಬಾಂಬ್ ಕರೆಗಳು ಹೆಚ್ಚಾಗಿವೆ. ಇತ್ತೀಚೆಗೆ ಈ ಕರೆಗಳು ರಾಜ್ಯದಲ್ಲಿ ಸಾಕಷ್ಟು ಆತಂಕ ಮೂಡಿಸುತ್ತಿದ್ದವು. ಅದರಲ್ಲೂ ಶಾಲೆಗಳಿಗೆ ಬಾಂಬ್ ಬೆದರಿಕೆಯ ಕರೆ ಬರುತ್ತಿರುವುದು ಆತಂಕಕ್ಕೆ ಕಾರಣವಾಗುತ್ತಿದೆ.
ಇತ್ತೀಚೆಗೆ ರಾಜ್ಯದಲ್ಲಿ 60 ಶಾಲೆಗಳಿಗೆ ಬಾಂಬ್ ಕರೆಗಳು ಬಂದಿವೆ. ಅನಾಮಿಕ ಕಿಡಿಗೇಡಿಗಳು ಈ ದುಷ್ಕೃತ್ಯ ಎಸಗುತ್ತಿದ್ದು, ಇಂತಹ ಪ್ರಕರಣಗಳನ್ನು ಬೇಧಿಸಲು ವಿಶೇಷ ಪೊಲೀಸರ ತಂಡ ರಚಿಸಲಾಗಿದೆ. ಇ ಮೇಲ್, ಫೋನ್, ಪತ್ರದ ಮೂಲಕ ಹುಸಿ ಬಾಂಬ್ ಬೆದರಿಕೆಗಳನ್ನು ಹಾಕಲಾಗುತ್ತಿದೆ. ಶಾಲೆಗಳು, ಏರ್ ಪೋರ್ಟ್, ರೈಲ್ವೇ ಬಸ್ ನಿಲ್ದಾಣಗಳು ದುಷ್ಕರ್ಮಿಗಳು ಟಾರ್ಗೆಟ್ ಗಳಾಗಿವೆ. ಹೀಗೆ ಕಳೆದ ಮೂರು ವರ್ಷಗಳಲ್ಲಿ ರಾಜ್ಯದಲ್ಲಿ ಬರೋಬ್ಬರಿ 169 ಹುಸಿ ಬಾಂಬ್ ಕರೆಗಳು ಬಂದಿವೆ ಎನ್ನಲಾಗಿದೆ.
ಬೆಳಗಾವಿ ಸುವರ್ಣಸೌಧದ ಅಧಿವೇಶನದಲ್ಲಿ ವಿಧಾನಪರಿಷತ್ ಸದಸ್ಯ ಮಧು ಜಿ ಮಾದೇಗೌಡ ಕೇಳಿರುವ ಪ್ರಶ್ನೆಗೆ ಗೃಹ ಇಲಾಖೆ ಉತ್ತರ ನೀಡಿದೆ. ಬಂಧಿತ ಆರೋಪಿಗಳು ವಿಮಾನ ನಿಲ್ದಾಣ, ರೈಲು ನಿಲ್ದಾಣ, ಬ್ಯಾಂಕ್, ಹೋಟೆಲ್, ದೇಗುಲ, ಶಾಲಾ- ಕಾಲೇಜು ಸೇರಿದಂತೆ ಇತರ ಕಡೆಗಳಿಗೆ ಹುಸಿ ಬಾಂಬ್ ಬೆದರಿಕೆ ಹಾಕಿದ್ದಾರೆ. ಬೆದರಿಕೆ ಕರೆ, ಸಂದೇಶಗಳು ಕಳುಹಿಸಿದ ನಂತರ ನೈಜವಾಗಿ ಯಾವುದೇ ಪ್ರಕರಣ ದಾಖಲಾಗಿಲ್ಲ ಎಂದು ಹೇಳಿದೆ.
ಬೆಂಗಳೂರು ನಗರದಲ್ಲಿ 134, ಮೈಸೂರು ನಗರದಲ್ಲಿ 1, ಹುಬ್ಬಳ್ಳಿ ಧಾರವಾಡದಲ್ಲಿ 1, ಬೆಳಗಾವಿ ನಗರದಲ್ಲಿ 2, ಮಂಗಳೂರು ನಗರದಲ್ಲಿ 11, ಕಲಬುರಗಿಯಲ್ಲಿ 2, ಬೆಂಗಳೂರು ಜಿಲ್ಲೆಯಲ್ಲಿ 14, ರಾಮನಗರದಲ್ಲಿ 1, ಉತ್ತರ ಕನ್ನಡದಲ್ಲಿ 1, ಬೆಳಗಾವಿ ಜಿಲ್ಲೆಯಲ್ಲಿ 1, ವಿಜಯಪುರದಲ್ಲಿ 1, ಬಳ್ಳಾರಿಯಲ್ಲಿ 1 ಹುಸಿ ಬಾಂಬ್ ಕರೆಗಳು ದಾಖಲಾಗಿವೆ ಎಂದು ಮಾಹಿತಿ ನೀಡಿದ್ದಾರೆ.