ಬೆಳಗಾವಿ: ವಿಧಾನ ಪರಿಷತ್ ಕಲಾಪದಲ್ಲಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ (Lakshmi Hebbalkar) ಅವರಿಗೆ ಶಾಸಕ ಸಿ.ಟಿ. ರವಿ ಅಶ್ಲೀಲ ಪದ ಬಳಕೆ ಮಾಡಿದ್ದಾರೆಂಬ ವಿಷಯ ದೊಡ್ಡ ಗದ್ದಲಕ್ಕೆ ಕಾರಣವಾಗಿತ್ತು. ಈಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿ.ಟಿ ರವಿ ಆ ಪದ ಬಳಸಿದ್ದಾರೆ ಎನ್ನಲಾದ ವೀಡಿಯೋವೊಂದನ್ನ ಲಕ್ಷ್ಮಿ ಹೆಬ್ಬಾಳ್ಕರ್ ಬಿಡುಗಡೆ ಮಾಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿ.ಟಿ. ರವಿ ಹೇಳಿಕೆಯನ್ನು ಈ ಲಕ್ಷ್ಮಿ ಹೆಬ್ಬಾಳ್ಕರ್ ಯಾವತ್ತಿಗೂ ಕ್ಷಮಿಸಲ್ಲ. ಅವರಿಗೆ ಶಿಕ್ಷೆ ಆಗುವವರೆಗೂ ನಾನು ಬಿಡುವುದಿಲ್ಲ. ಬಿಜೆಪಿಯಲ್ಲಿ ಯಾರಾದರೂ ಒಬ್ಬರು ಕ್ಷಮೆ ಕೇಳಿದರಾ? ಸಿ.ಟಿ ರವಿನ ಮೆರವಣಿಗೆ ಮಾಡ್ತಾರೆ, ಇದು ಸರೀನಾ? ನಿಮ್ಮ ಮನೆಯಲ್ಲಿ ಹೆಣ್ಣು ಮಕ್ಕಳಿಲ್ವಾ? ದೇವರ ಹತ್ರ ಹೋಗಿ ನಿಂತ್ಕೊಳ್ತಿರಿ, ಒಬ್ಬ ಹೆಣ್ಮಗಳಿಗೆ ಈ ರೀತಿ ಮಾತನಾಡಿ, ರಾಜಾರೋಷವಾಗಿ ಓಡಾಡ್ತಿದ್ದೀರಿ ನಿಮಗೆ ನಾಚಿಗೆ ಆಗಬೇಕು. ಇದನ್ನು ಸುಮ್ಮನೆ ಬಿಡಲ್ಲ, ಕಾನೂನು ಹೋರಾಟ ಮಾಡುತ್ತೇನೆ ಎಂದು ಗುಡುಗಿದ್ದಾರೆ.
ಸಿಎಂ ಮತ್ತು ಸಭಾಪತಿ ಅವರು ತನಿಖೆ ಮಾಡಬೇಕು. ಆದಷ್ಟು ಬೇಗೆ ಎಫ್‌ಎಸ್‌ಎಲ್ ರಿಪೋರ್ಟ್ ತರಿಸಿಕೊಳ್ಳಬೇಕು. ಇಂತಹ ನೂರು ಸಿ.ಟಿ. ರವಿ ಬಂದರೂ ನಾನು ಎದುರಿಸುತ್ತೇನೆ. ನನ್ನ ಬಳಿ ದಾಖಲೆ ಇವೆ. ಪ್ರಧಾನಿ ಮೋದಿ, ರಾಷ್ಟ್ರಪತಿಗೆ ಪತ್ರ ಬರೆಯುತ್ತೇನೆ. ಅವಕಾಶ ಸಿಕ್ಕರೆ ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಿ ವಿಷಯ ತಿಳಿಸುತ್ತೇನೆ ಎಂದು ತಿಳಿಸಿದ್ದಾರೆ.
ಎನ್‌ಕೌಂಟರ್ ಅನ್ನುವವರಿಗೆ ನಾಚಿಕೆ ಆಗಬೇಕು. ಚಿಕ್ಕಮಗಳೂರಿಗೆ ಬಂದು ನಿಮ್ಮ ಮನೆ ಹೆಣ್ಣು ಮಕ್ಕಳಿಗೆ ನೀವು ಅಂದ ಮಾತು ಹೇಳಿದರೆ ಸುಮ್ಮನಿರ್ತೀರಾ? ಒಬ್ಬರೇ ಇದ್ದಾಗ ಕುಳಿತು ಯೋಚನೆ ಮಾಡಿ ಎಂದು ರವಿ ವಿರುದ್ಧ ಗುಡುಗಿದ್ದಾರೆ.