ಬೆಂಗಳೂರು: ಸೈಬರ್ ವಂಚಕರು ಬೆಂಗಳೂರಿನ ಟೆಕ್ಕಿಯೊಬ್ಬರಿಗೆ ಬರೋಬ್ಬರಿ 11 ಕೋಟಿ ರೂ. ವಂಚಿಸಿರುವ ಘಟನೆ ನಡೆದಿದೆ.
ಮುಂಬೈ ಕ್ರೈಂ ಬ್ರ್ಯಾಂಚ್ ಪೊಲೀಸರು (Crime Branch Police) ಎಂದು ಹೇಳಿಕೊಂಡು ಸೈಬರ್ ವಂಚಕರು (Cyber Crime) ಬೆಂಗಳೂರಿನ (Bengaluru) ಸಾಫ್ಟ್ ವೇರ್ ಇಂಜಿನಿಯರ್ಗೆ 11 ಕೋಟಿ ರೂ. ವಂಚಿಸಿದ್ದಾರೆ. ವಿಜಯ್ ಕುಮಾರ್ ವಂಚನೆಗೆ ಒಳಗಾಗಿರುವ ಸಾಫ್ಟ್ವೇರ್ ಇಂಜಿನಿಯರ್.
ವಂಚಕರು ಮುಂಬೈನ ಕೊಲಾಬಾದಲ್ಲಿ ನಿಮ್ಮ ಮೇಲೆ ಪ್ರಕರಣವೊಂದು ದಾಖಲಾಗಿದ್ದು ಆಧಾರ್ ಕಾರ್ಡ್ ಬಳಸಿಕೊಂಡು ಹಣ ವರ್ಗಾವಣೆಯಾಗಿದೆ. 6 ಕೋಟಿ ರೂ. ವಂಚನೆಯಾಗಿದೆ. ಸದ್ಯ ಈ ಪ್ರಕರಣ ಸುಪ್ರೀಂಕೋರ್ಟ್ನಲ್ಲಿ ಇದೆ ಎಂದು ಹೆದರಿಸಿದ್ದಾರೆ. ಆನಂತರ ವಿಡಿಯೋ ಕಾಲ್ ಮೂಲಕ ವಿನಯ್ ಕುಮಾರ್ ಅವರನ್ನು ಡಿಜಿಟಲ್ ಅರೆಸ್ಟ್ (Digital Arrest) ಮಾಡಿದ್ದಾರೆ. ಒಂದು ತಿಂಗಳ ಕಾಲ ಮನೆಯಲ್ಲಿ ಇರದಂತೆ ಹೇಳಿದ್ದಾರೆ. ಆಗ ವಿಜಯ್ ಕುಮಾರ್ ಅವರು ಯಲಹಂಕದ ಲಾಡ್ಜ್ ನಲ್ಲಿ ಉಳಿದುಕೊಂಡಿದ್ದಾರೆ.
ವಿಜಯ್ ಕುಮಾರ್ ಕಳೆದ ಹಲವು ವರ್ಷಗಳಿಂದ ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡಿದ್ದರು. ಇದನ್ನೇ ಟಾರ್ಗೆಟ್ ಮಾಡಿದ ಸೈಬರ್ ವಂಚಕರು ಟೆಕ್ಕಿ ವಿನಯ್ ಕುಮಾರ್ ಅವರಿಂದ ಷೇರುಗಳನ್ನು ಮಾರಾಟ ಮಾಡಿಸಿದ್ದಾರೆ. ನಂತರ ಹಂತ ಹಂತವಾಗಿ ಹಣ ಹಾಕಿಸಿಕೊಂಡು 11.83 ಕೋಟಿ ರೂ. ಹಣವನ್ನು ತಮ್ಮ ಖಾತೆಗೆ ವರ್ಗಾಯಿಸಿಕೊಂಡು ವಂಚಿಸಿದ್ದಾರೆ. ವಂಚನೆಗೊಳಗಾಗಿದ್ದು ಬೆಳಕಿಗೆ ಬರುತ್ತಿದ್ದಂತೆ ವಿನಯ್ ಕುಮಾರ್ ದೂರು ನೀಡಿದ್ದಾರೆ.