ಬೆಂಗಳೂರು: ರಾಜ್ಯದ ಸರ್ಕಾರಿ ಶಾಲೆಗಳಲ್ಲಿ 59,772 ಶಿಕ್ಷಕರ ಹುದ್ದೆಗಳು ಖಾಲಿ ಇದ್ದು, ಬರೋಬ್ಬರಿ 6,158 ಶಾಲೆಗಳಲ್ಲಿ ಕೇವಲ ಒಬ್ಬರೇ ಒಬ್ಬ ಶಿಕ್ಷಕರು ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಪ್ರಾಥಮಿಕ ಶಾಲೆಗಳಲ್ಲಿ 50,067 ಹಾಗೂ ಪ್ರೌಢಶಾಲೆಗಳಲ್ಲಿ 9,705 ಹುದ್ದೆಗಳು ಖಾಲಿ ಇವೆ ಎಂದು ತಿಳಿದು ಬಂದಿದೆ. ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿರುವಂತೆ, ರಾಜ್ಯದಲ್ಲಿನ ಪ್ರಾಥಮಿಕ ಶಾಲಾ ಶಿಕ್ಷಕರ ಕೊರತೆ ಹೆಚ್ಚಾಗಿದೆ. ಇದು ಪ್ರಾಥಮಿಕದಿಂದ ಪ್ರೌಢಶಾಲೆಯವರೆಗೆ ಎಲ್ಲಾ ಹಂತಗಳಲ್ಲಿ ಶೈಕ್ಷಣಿಕ ಗುಣಮಟ್ಟವನ್ನು ನಾಶಪಡಿಸುತ್ತಿದೆ ಎಂದು ಶಿಕ್ಷಣತಜ್ಞರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.
ಹೀಗಾಗಿ ಕೇರಳ ಸರ್ಕಾರದ ಮಾದರಿ ಅನುಸರಿಸುವಂತೆ ಸರ್ಕಾರಕ್ಕೆ ಶಿಕ್ಷಣ ತಜ್ಞರು ಮನವಿ ಮಾಡಿದ್ದಾರೆ. ಶಾಲೆಗಳ ಗುಣಮಟ್ಟ ಹೆಚ್ಚಿಸಲು ಐದು ವರ್ಷಗಳಲ್ಲಿ 10 ಸಾವಿರ ಕೋಟಿ ರೂ.ಗಳನ್ನು ಕೇರಳ ಸರ್ಕಾರ ಮೀಸಲಿಟ್ಟಿದೆ ಎಂದು ತಜ್ಞರು ಹೇಳಿದ್ದಾರೆ.
ರಾಜ್ಯದಲ್ಲಿ 50,067 ಪ್ರಾಥಮಿಕ ಶಿಕ್ಷಕರ ಹುದ್ದೆಗಳು ಖಾಲಿಯಿವೆ. 2028-29ರ ವೇಳೆಗೆ 34,807ಕ್ಕೂ ಹೆಚ್ಚು ಶಿಕ್ಷಕರು ನಿವೃತ್ತರಾಗಲಿದ್ದಾರೆ. ಹೀಗಾಗಿ ಮತ್ತಷ್ಟು ಕೊರತೆ ಹೆಚ್ಚಾಗುವ ಸಾಧ್ಯತೆ ಇದೆ. ಕೂಡಲೇ ಸರ್ಕಾರವು ಕ್ರಮ ಕೈಗೊಳ್ಳದಿದ್ದರೆ 80 ಸಾವಿರ ಶಿಕ್ಷಕರ ಹುದ್ದೆ ಖಾಲಿಯಾಗುವ ಸಮಸ್ಯೆ ಎದುರಾಗಬಹುದು. ಪರಿಣಾಮವಾಗಿ ರಾಜ್ಯಾದ್ಯಂತ ಶಾಲೆಗಳು ದುರ್ಬಲವಾಗಲಿವೆ ಎಂದು ಹೇಳಿದ್ದಾರೆ