ದಾವಣಗೆರೆ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಅಶ್ಲೀಲ ಪದ ಬಳಕೆ ಮಾಡಿದ ಆರೋಪದ ಹಿನ್ನೆಲೆಯಲ್ಲಿ ಸಿ.ಟಿ. ರವಿ ಅವರನ್ನು ಪೊಲೀಸರು ಅರೆಸ್ಟ್ ಮಾಡಿದ್ದರು. ಹೀಗಾಗಿ ನಿನ್ನೆ ರಾತ್ರಿಯಿಡೀ ಪೊಲೀಸರು ಸುತ್ತಾಡಿಸಿ, ಕಿರುಕುಳ ನೀಡಿದ್ದಾರೆ ಎಂದು ಸಿ.ಟಿ. ರವಿ ಈಗ ಆರೋಪಿಸಿದ್ದಾರೆ.
ದಾವಣಗೆರೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾಲ್ಕು ಜಿಲ್ಲೆ, 50ಕ್ಕೂ ಅಧಿಕ ಗ್ರಾಮಗಳು, 14 ಗಂಟೆಗೂ ಹೆಚ್ಚು ಸಮಯ ಅಲೆದಾಡಿಸಿದ್ದರು. ಆಧಾರವಿಲ್ಲದ ಮತ್ತು ಪೊಲೀಸ್ ಠಾಣೆಯ ಪರಿಧಿಗೆ ಬಾರದ ಮೊಕದ್ದಮೆಯಲ್ಲಿ ನನಗೆ ಯಾವುದೇ ನೋಟಿಸ್ ಕೊಡದೆ ನನ್ನನ್ನು ಬಂಧಿಸಿ ಅಮಾನವೀಯವಾಗಿ ವರ್ತಿಸಿದ್ದಾರೆ. ಮಾನಸಿಕವಾಗಿ ಕುಗ್ಗಿಸುವ ಮತ್ತು ದೈಹಿಕವಾಗಿ ದೌರ್ಜನ್ಯ ಎಸಗುವ ಪ್ರಯತ್ನವನ್ನು ಪೊಲೀಸ್ ಬಲ ಉಪಯೋಗಿಸಿಕೊಂಡು ಕಾಂಗ್ರೆಸ್ ಸರ್ಕಾರ ಮಾಡಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಸಂಕಷ್ಟದ ಸಂದರ್ಭದಲ್ಲಿ ಪಕ್ಷದ ಎಲ್ಲಾ ಮುಖಂಡರು, ಸಾಮಾನ್ಯ ಕಾರ್ಯಕರ್ತರು ಬೆಂಬಲ ನೀಡಿ ಆತ್ಮಸ್ಥೈರ್ಯ ತುಂಬಿದ್ದಾರೆ. ನಾನು ಕೃತಜ್ಞತೆ ಸಲ್ಲಿಸುತ್ತೇನೆ. ಬೆಳಗಾವಿಯಲ್ಲಿ ನಾನು ಸತ್ಯಮೇವ ಜಯತೆ ಅಂತಾ ಹೇಳಿದ್ದೆ. ಈಗ ಹೈಕೋರ್ಟ್ ಅದೇಶದಿಂದ ಸತ್ಯಕ್ಕೆ ಜಯ ಸಿಕ್ಕಿದೆ ಎಂದಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ (Vijayendra) ಮಾತನಾಡಿ, ರಕ್ತ ಸುರಿಯುತ್ತಿದ್ದರೂ ಸಿ.ಟಿ.ರವಿ ಅವರನ್ನು ಲೆಕ್ಕಿಸದೇ ಕರೆದುಕೊಂಡು ಹೋಗಿದ್ದಾರೆ. ಮಾನವೀಯತೆ ಮರೆತು 500 ಕಿಮೀ ಸುತ್ತಿಸಿದ್ದಾರೆ. ಪ್ರತಿ ಅರ್ಧ ಗಂಟೆಗೆ ಪೊಲೀಸರಿಗೆ ಮೇಲಾಧಿಕಾರಿಗಳಿಂದ ಪೋನ್ ಕರೆ ಬರುತ್ತಿತ್ತು. ಸಿಬಿಐ ತನಿಖೆಗೆ ವಹಿಸುವಂತೆ ಒತ್ತಾಯಿಸಿದ್ದಾರೆ. ಸಿಟಿ ರವಿಯವರಿಗೆ ಜಾಮೀನು ಸಿಕ್ಕಿದೆ ಎನ್ನುವದು ಅಷ್ಟೇ ಅಲ್ಲ. ಸರ್ಕಾರಕ್ಕೆ ಹೈಕೋರ್ಟ್ ಕಪಾಳಮೋಕ್ಷ ನೀಡಿದೆ ಎಂದಿದ್ದಾರೆ.