ನೋ ಬ್ರೋಕರ್ ಆಪ್ ನಂಬಿ ಒಂದೇ ಮನೆಗೆ ಹಣ ಕೊಟ್ಟು ಬರೋಬ್ಬರಿ 22 ಜನ ಮೋಸ ಹೋಗಿರುವ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ.
ಒಂದೇ ಮನೆ ತೋರಿಸಿ ಕೋಟಿ ಕೋಟಿ ವಂಚಿಸಿರುವ ಆರೋಪಿ ಕೂಡ ಪರಾರಿಯಾಗಿದ್ದಾನೆ. ಹೀಗಾಗಿ ಹೊಟ್ಟೆ ಬಟ್ಟೆ ಕಟ್ಟಿ, ಹಣ ಕೂಡಿಟ್ಟವರ ಬದುಕು ಬೀದಿಗೆ ಬಂದಿದೆ. ಈ ಘಟನೆ ಹೆಬ್ಬಾಳ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿನ ಚೋಳನಗರದಲ್ಲಿ ನಡೆದಿದೆ.

ವ್ಯಕ್ತಿಯೊಬ್ಬ ಒಂದೇ ಮನೆ ತೋರಿಸಿ ಬರೋಬ್ಬರಿ 22 ಜನರಿಂದ 2 ಕೋಟಿ ರೂ. ಗೂ ಅಧಿಕ ಹಣ ವಸೂಲಿ ಮಾಡಿ ವಂಚಿಸಿ, ಪರಾರಿಯಾಗಿದ್ದಾನೆ. ಹಣ ಕಳೆದುಕೊಂಡ ಸಂತ್ರಸ್ತರು ಹೆಬ್ಬಾಳ್ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದಾರೆ. ಆದರೆ, ಪೊಲೀಸರ ನಿರ್ಲಕ್ಷ್ಯದಿಂದಾಗಿ ಬೇಸತ್ತು ಸಿಸಿಬಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಗಿರೀಶ್ ಎಂಬ ವ್ಯಕ್ತಿ ಹೆಬ್ಬಾಳ ಸಮೀಪದ ಚೋಳನಗರದಲ್ಲಿ ತನ್ನ ಪತ್ನಿಯ ಹೆಸರಿನಲ್ಲಿರುವ ಮನೆಯನ್ನು ಲೀಸ್ ಗೆ ಕೊಡುವುದಿದೆ ಎಂದು ಬ್ರೋಕರ್ ಆಪ್ ಗೆ ಹಾಕಿದ್ದಾನೆ. ಮನೆ ನೋಡಿ ಕರೆ ಮಾಡಿದ 22 ಜನರಿಂದ ಹಣ ಪಡೆದು ವಂಚಿಸಿದ್ದಾನೆ. ಹೀಗೆ ಒಬ್ಬೊಬ್ಬರಿಂದ 8 ರಿಂದ 13 ಲಕ್ಷ ರೂ. ವರೆಗೆ ವಸೂಲಿ ಮಾಡಿದ್ದಾನೆ.
ಆನಂತರ ಹಣ ಕೊಟ್ಟವರಿಗೆ ಒಂದೊಂದು ಉತ್ತರ ನೀಡುತ್ತ ಕಾಲ ತಳ್ಳುತ್ತ ಹೋಗಿದ್ದಾನೆ. ಮನೆ ರಿನೋವೇಶನ್ ಆಗುತ್ತಿದೆ. ಈಗಿದ್ದ ಬಾಡಿಗೆದಾರರ ಜೊತೆ ಸಮಸ್ಯೆ ಆಗಿದೆ. ತಂದೆ ಸತ್ತಿದ್ದಾನೆ ಎಂಬೆಲ್ಲ ಕಾರಣಗಳನ್ನು ಹೇಳುತ್ತ ದಿನ ಕಳೆದಿದ್ದಾನೆ. ಇದರಿಂದ ರೋಸಿ ಹೋದ ಜನರು ಮರಳಿ ಹಣ ಕೇಳುತ್ತಿದ್ದಂತೆ ಚೆಕ್ ನೀಡಿ, ಹಣ ಹಾಕದೆ ವಂಚಿಸಿದ್ದಾನೆ.

ಹಣ ಕೊಟ್ಟವರ ಉಪಟಳ ಹೆಚ್ಚಾಗುತ್ತಿದ್ದಂತೆ ಪತ್ನಿ ದೀಪಾ, ನಾದಿನಿ ರೂಪಾ, ಸರಿತಾ ಹೆಸರಿನ ಚೆಕ್ ಗಳನ್ನು ನೀಡಿದ್ದಾನೆ. ಚೆಕ್ ನೀಡುವುದರಲ್ಲೂ ಮೋಸ ಮಾಡಿದ್ದಾನೆ. ಸಹಿ ಮಿಸ್ ಮ್ಯಾಚ್, ಹೆಸರಿಗೆ ತಪ್ಪಾದ ಸ್ಪೇಲಿಂಗ್ ಬರೆದು ವಂಚಿಸಿದ್ದಾನೆ. ಮೋಸ ಹೋದವರು ಮನೆಯ ಬಳಿ ಬಂದು ಕೇಳಿದರೆ, ಕುಟುಂಬಸ್ಥರೆಲ್ಲ ಸೇರಿಕೊಂಡು ಡ್ರಾಮಾ ಮಾಡಿದ್ದಾರೆ. ಈ ಕೃತ್ಯದ ಹಿಂದೆ ಕುಟುಂಬಸ್ಥರೂ ಇದ್ದಾರೆ ಎನ್ನಲಾಗಿದೆ. ಹೀಗಾಗಿ ಮೋಸ ಹೋದವರು ಈಗ ನ್ಯಾಯ ಕೊಡಿಸಬೇಕೆಂದು ಸಿಸಿಬಿ ಅಧಿಕಾರಿಗಳಿಗೆ ಮನವಿ ಮಾಡುತ್ತಿದ್ದಾರೆ.