ಬಳ್ಳಾರಿ: ಇದೇ ಮೊದಲ ಬಾರಿಗೆ ತೃತೀಯ ಲಿಂಗಿಯೊಬ್ಬರು (Transgender) ಪ್ರಧ್ಯಾಪಕಿಯಾಗಿ ನೇಮಕಗೊಂಡಿದ್ದಾರೆ.
ಬಳ್ಳಾರಿ ವಿಶ್ವವಿದ್ಯಾಲಯದ ಅರೆಕಾಲಿಕ ಪ್ರಾಧ್ಯಾಪಕಿಯಾಗಿ ನೇಮಕಗೊಳ್ಳುವ ಮೂಲಕ ಹೊಸದೊಂದು ಇತಿಹಾಸ ಬರೆದಿದ್ದಾರೆ. ಜಿಲ್ಲೆಯ ಕುರುಗೋಡು ಪಟ್ಟಣದ ರೇಣುಕಾ ಪೂಜಾರಿ ಎಂಬುವವರು ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ (Bellary University) ನಂದಿಹಳ್ಳಿ ಸ್ನಾತಕೋತ್ತರ ಕೇಂದ್ರದ ಕನ್ನಡ ಅಧ್ಯಾಪಕಿಯಾಗಿ ನೇಮಕವಾಗಿದ್ದಾರೆ.
ರಾಜ್ಯದಲ್ಲಿ ಮಂಗಳಮುಖಿಯೊಬ್ಬರು ಪ್ರಾಧ್ಯಾಪಕಿಯಾಗಿರುವುದು ಇದೇ ಮೊದಲ ಬಾರಿಗೆ. ಆದರೆ, ಇದಕ್ಕೂ ಮುನ್ನ ರಾಜ್ಯದ ವಿವಿಧ ಶಾಲೆಗಳಲ್ಲಿ ಈಗಾಗಲೇ ಮೂವರು ಮಂಗಳಮುಖಿಯರು ಶಿಕ್ಷಕಿಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ರೇಣುಕಾ ಪೂಜಾರಿ ಮೂಲತಃ ಬಳ್ಳಾರಿ ಜಿಲ್ಲೆ ಕುರುಗೋಡುದವರು. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಹುಟ್ಟೂರಿನಲ್ಲಿಯೇ ಪೂರ್ಣಗೊಳಿಸಿ, ಪದವಿ ಪೂರ್ವ ಶಿಕ್ಷಣವನ್ನು ಬಳ್ಳಾರಿಯ ಸರ್ಕಾರಿ ಪದವಿ ಪೂರ್ವ (ಮುನ್ಸಿಪಲ್) ಕಾಲೇಜಿನಲ್ಲಿ ಮುಗಿಸಿದ್ದಾರೆ.