ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ ಅವರು ಲೋಕಸಭೆಯ ಅಧಿವೇಶನಕ್ಕೆ ಪ್ರತಿ ದಿನ ಒಂದೊಂದು ಸಂದೇಶ ಹೊತ್ತ ಬ್ಯಾಗ್ ಧರಿಸಿ ಬರುತ್ತಿದ್ದಾರೆ. ಇದಕ್ಕೆ ಹಲವರು ಹಲವು ರೀತಿಯಲ್ಲಿ ವ್ಯಾಖ್ಯಾನ ಮಾಡುತ್ತಿದ್ದಾರೆ.
ಸೋಮವಾರವಷ್ಟೇ ಪ್ಯಾಲೆಸ್ತೀನ್ ಎಂದು ಬರೆದಿರುವ ಬ್ಯಾಗ್ ನ್ನು ಸಂಸತ್ತಿಗೆ ಧರಿಸಿ ಬಂದಿದ್ದರು. ಇದು ವಿವಾದಕ್ಕೆ ಕಾರಣವಾಗಿತ್ತು. ಇಂದು ಬಾಂಗ್ಲಾದೇಶದಲ್ಲಿನ ಹಿಂದೂ ಹಾಗೂ ಕ್ರಿಶ್ಚಿಯನ್ನರ ಪರವಾಗಿ ನಿಲ್ಲೋಣ ಎಂಬ ಬರಹ ಇರುವ ಬ್ಯಾಗ್ ಧರಿಸಿ ಬಂದಿದ್ದಾರೆ.
ಪ್ರಿಯಾಂಕಾ ಗಾಂಧಿ ಅವರು ಇದೇ ಮೊದಲ ಬಾರಿಗೆ ಲೋಕಸಭೆ ಪ್ರವೇಶಿದ್ದಾರೆ. ಇದು ಅವರ ಮೊದಲ ಅಧಿವೇಶನ. ಸೋಮವಾರ ಲೋಕಸಭೆಯ ಅಧಿವೇಶನದಲ್ಲಿ ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತರ ಮೇಲೆ ನಡೆದ ದೌರ್ಜನ್ಯದ ವಿರುದ್ಧ ಧ್ವನಿ ಎತ್ತಿದ್ದರು. ಸರ್ಕಾರವು ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತರು, ಹಿಂದೂಗಳು ಮತ್ತು ಕ್ರಿಶ್ಚಿಯನ್ನರ ಮೇಲಿನ ದೌರ್ಜನ್ಯದ ವಿಷಯವನ್ನು ಎತ್ತಬೇಕು. ಇದು ಬಾಂಗ್ಲಾದೇಶ ಸರ್ಕಾರದೊಂದಿಗೆ ಚರ್ಚಿಸಬೇಕು ಮತ್ತು ನೋವಿನಲ್ಲಿರುವವರಿಗೆ ಬೆಂಬಲ ನೀಡಬೇಕು ಎಂದು ಮನವಿ ಮಾಡಿದ್ದರು.
ಪ್ಯಾಲೆಸ್ತೀನ್ ಬ್ಯಾಗ್ ಹಿಡಿದು ಬಂದಿದ್ದನ್ನು ಬಿಜೆಪಿ ಮುಸ್ಲಿಂ ಓಲೈಕೆ ಎಂದು ಕರೆದಿದ್ದಾರೆ. ಪ್ಯಾಲೆಸ್ತೀನ್ ಪರ ಬೆಂಬಲ ಸೂಚಿಸಿರುವ ಸಂಕೇತ ಎಂದು ಹಲವರು ಆರೋಪಿಸಿದ್ದಾರೆ.