ಶಿವಮೊಗ್ಗ: ವಿಶ್ವವಿಖ್ಯಾತ ಜೊಗ ಜಲಪಾತಕ್ಕೆ ಎರಡೂವರೆ ತಿಂಗಳು ಪ್ರವಾಸಿಗರು ಬರುವಂತಿಲ್ಲ ಎಂದು ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.
ಜಿಲ್ಲೆಯ ಸಾಗರ ತಾಲೂಕಿನಲ್ಲಿರುವ ಮನಮೋಹಕ, ಕಣ್ಮನ ಸೆಳೆಯುವ ಜೋಗ ಜಲಪಾತ ಪ್ರವಾಸಿಗರ ನೆಚ್ಚಿನ ತಾಣವಾಗಿದೆ. ಈಗ ಚಳಿಗಾಲ ಆಗಿದ್ದರಿಂದ ಪ್ರವಾಸಿಗರನ್ನು ತನ್ನತ್ತ ಆಕರ್ಷಿಸಿಕೊಳ್ಳಲು ಜೋಗ ಜಲಪಾತ ಸಿದ್ಧವಾಗಿತ್ತು. ಹೀಗಾಗಿ ಶೈಕ್ಷಣಿಕ ಪ್ರವಾಸದ ಮೇರೆಗೆ ಶಾಲಾ-ಕಾಲೇಜು ಮಕ್ಕಳು ಸೇರಿದಂತೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಜೋಗ ಜಲಪಾತಕ್ಕೆ ಬರುವುದು ಸರ್ವೆ ಸಾಮಾನ್ಯ. ಈ ಸಂದರ್ಭದಲ್ಲೇ ಜಲಪಾತ ವೀಕ್ಷಣೆಗೆ ಜಿಲ್ಲಾಧಿಕಾರಿಗಳು ನಿರ್ಬಂಧ ಹೇರಿದ್ದು ಪ್ರವಾಸಿಗರಿರೆ ಗಾಯದ ಮೇಲೆ ಬರೆ ಎಳೆದಂತಾಗಿದೆ.
ಸಾಗರ ತಾಲೂಕಿನ ಜೋಗ ಜಲಪಾತದ ಮುಖ್ಯ ದ್ವಾರದಲ್ಲಿ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಜನವರಿ 1ರಿಂದ ಮಾರ್ಚ್ 15ರವರೆಗೆ ಅಂದರೆ ಎರಡೂವರೆ ತಿಂಗಳ ಕಾಲ ಪ್ರವಾಸಿಗರ ವೀಕ್ಷಣೆಗೆ ನಿರ್ಬಂಧಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.