ಬಿಬಿಎಂಪಿಯ ಮುಖ್ಯ ಆಯುಕ್ತರು, ಪ್ರಾಮಾಣಿಕ ಮತ್ತು ದಕ್ಷ ಹಿರಿಯ ಅಧಿಕಾರಿಗಳನ್ನು ಭ್ರಷ್ಟ ಹಾಗೂ ಕಿರಿಯ ಅಧಿಕಾರಿಗಳ ಸಮ್ಮುಖದಲ್ಲಿ ಹೀಯಾಳಿಸುತ್ತಿದ್ದು, ಕೂಡಲೇ ತಮ್ಮ ವರ್ತನೆ ಬದಲಾಯಿಸಿಕೊಳ್ಳಬೇಕು ಎಂದು ಬಿಬಿಎಂಪಿ ಆಡಳಿತ ಪಕ್ಷದ ಮಾಜಿ ನಾಯಕ ರಮೇಶ್ ಎನ್.ಆರ್. ಆಗ್ರಹಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು, ಡಿ. 10ರಂದು ಬಿಬಿಎಂಪಿಯ ದಕ್ಷಿಣ ವಲಯದ ಕಚೇರಿಯಲ್ಲಿ ಮುಖ್ಯ ಆಯುಕ್ತರು ಹಾಗೂ ಅಧಿಕಾರಿಗಳು ಸಾರ್ವಜನಿಕರ ಕುಂದು ಕೊರತೆಗಳಿಗೆ ಸಂಬಂಧಿಸಿದಂತೆ “ಆಯುಕ್ತರ ನಡೆ ವಲಯದ ಕಡೆಗೆ” ಎಂಬ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಈ ವೇಳೆ ಮುಖ್ಯ ಆಯುಕ್ತರು, ಹಿರಿಯ ಅಧಿಕಾರಿಗಳನ್ನು ಕಿರಿಯ ಅಧಿಕಾರಿಗಳ ಸಮ್ಮುಖದಲ್ಲಿ ಹಾಗೂ ಭ್ರಷ್ಟ ಅಧಿಕಾರಿಗಳ ಸಮ್ಮುಖದಲ್ಲಿ ಹೀಯಾಳಿಸಿ ಮಾತನಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ದಕ್ಷಿಣ ವಲಯದ “ವಲಯ ಆಯುಕ್ತ”ರು ಹಾಗೂ “ಜಂಟಿ ಆಯುಕ್ತ”ರು ತಮ್ಮ ಕಾರ್ಯವನ್ನು ಪ್ರಾಮಾಣಿಕವಾಗಿ ನಡೆಸಿಕೊಂಡು ಬಂದಿದ್ದರು. ಈ ಅಧಿಕಾರಿಗಳ ಬಗ್ಗೆ ಆ ವ್ಯಾಪ್ತಿಯಲ್ಲಿ ಯಾವುದೇ ಆರೋಪಗಳಿರಲಿಲ್ಲ. ಆದರೆ, ಇವರನ್ನು ಹೀಯಾಳಿಸಿ ಮಾತನಾಡಿರುವ ಮುಖ್ಯ ಆಯುಕ್ತರು, ಗುತ್ತಿಗೆದಾರರಿಂದ ರಾಜಾರೋಷವಾಗಿ ಶೇ. 7ರಷ್ಟು ಕಮಿಷನ್ ಪಡೆಯುತ್ತಿದ್ದ “ರಾಜೇಶ್” ರಂತಹ ಭ್ರಷ್ಟ ಅಧಿಕಾರಿಯನ್ನು ಗೌರವಯುತವಾಗಿ ಮಾತನಾಡಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಮುಖ್ಯ ಆಯುಕ್ತರು ಪ್ರಾಮಾಣಿಕರನ್ನು ಗೌರವಯುತವಾಗಿ ನಡೆಸಿಕೊಂಡರೆ ಮಾತ್ರ ಪ್ರಾಮಾಣಿಕತೆ ಉಳಿಯಲು ಸಾಧ್ಯ ಎಂದು ಮನವಿ ಮಾಡಿದ್ದಾರೆ.