ಉಡುಪಿ: ಕಾರು ಕಳ್ಳತನ ಮಾಡಿದ್ದ ಆರೋಪಿಯ ಬಗ್ಗೆ 27 ವರ್ಷಗಳ ನಂತರ ಪೊಲೀಸರಿಗೆ ಸುಳಿವು ಸಿಕ್ಕ ಘಟನೆ ನಡೆದಿದೆ.
ಪಡುಬಿದ್ರಿ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿತ್ತು. ಪಡುಬಿದ್ರಿ ಠಾಣಾ ವ್ಯಾಪ್ತಿಯಲ್ಲಿನ ಹೆದ್ದಾರಿ ಹತ್ತಿರ ನಿಲ್ಲಿಸಿದ್ದ ಓಮ್ನಿ ಕಾರನ್ನು ಆರೋಪಿ ಕಳ್ಳತನ ಮಾಡಿದ್ದ. ಆರೋಪಿಯ ಬಗ್ಗೆ ಪೊಲೀಸರಿಗೆ 27 ವರ್ಷಗಳ ನಂತರ ಗೊತ್ತಾಗಿದೆ. ಆದರೆ, ಆ ಕಳ್ಳ 14 ವರ್ಷಗಳ ನಂತರ ಸಾವನ್ನಪ್ಪಿದ್ದಾನೆ ಎನ್ನಲಾಗಿದೆ.
ಪಡುಬಿದ್ರಿಯ ಜೇಮ್ಸ್ ಡಯಾನ್ ಅಂದ್ರಾದೆ ಎಂಬುವವರ ಮಾರುತಿ ಓಮ್ನಿ ಕಾರು 1997ರ ಸೆ.29ರಂದು ರಾತ್ರಿ ಕಳ್ಳತನವಾಗಿತ್ತು. ಪ್ರಕರಣ ದಾಖಲಿಸಿಕೊಂಡ ಪಡುಬಿದ್ರಿ ಪೊಲೀಸರು ಕಳವಾದ ಕಾರನ್ನು ಶಿವಮೊಗ್ಗ ಜಿಲ್ಲೆಯ ಸಾಗರ ಹತ್ತಿರ ಪತ್ತೆ ಹಚ್ಚಿದ್ದರು.
ಸಾಗರ ನಿವಾಸಿ ಹುಚ್ಚಪ್ಪ ಎಂಬಾತನನ್ನು ದಸ್ತಗಿರಿ ಮಾಡಲಾಗಿತ್ತು. ಆತ ವಿಚಾರಣೆ ಸಂದರ್ಭದಲ್ಲಿ ಸಾಗರದ ನಿವಾಸಿಗಳಾದ ಬಸವರಾಜು ಮತ್ತು ದುರ್ಗಾನಾಥ್ ಎಂಬವರೊಂದಿಗೆ ಸೇರಿ ಕಾರು ಕಳ್ಳತನ ಮಾಡಿರುವುದಾಗಿ ಮಾಹಿತಿ ನೀಡಿದ್ದ. ಹೀಗಾಗಿ ಪೊಲೀಸರು ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ಸಂದರ್ಭದಲ್ಲಿ ಬಸವರಾಜು ಮತ್ತು ದುರ್ಗಾನಾಥ್ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದರು. ಹೀಗಾಗಿ ಅವರಿಬ್ಬರ ವಿರುದ್ಧ ಎಲ್‌ಪಿಸಿ ವಾರಂಟ್ ಜಾರಿ ಮಾಡಲಾಗಿತ್ತು.
27 ವರ್ಷ ಬಳಿಕ ಪಡುಬಿದ್ರಿ ಪೊಲೀಸರು ಆರೋಪಿಗಳ ಪತ್ತೆಗಾಗಿ ಸಾಗರಕ್ಕೆ ತೆರಳಿದ್ದ ಸಂದರ್ಭ ಆರೋಪಿ ಬಸವರಾಜು ಎಂಬಾತ ಆತನ ಹುಟ್ಟೂರು ಶಿವಮೊಗ್ಗದಲ್ಲಿ 14 ವರ್ಷ ಹಿಂದೆಯೇ ಸಾವನ್ನಪ್ಪಿರುವ ಮಾಹಿತಿ ಗೊತ್ತಾಗಿದೆ. ಮತ್ತೋರ್ವ ಆರೋಪಿಯನ್ನು ಪೊಲೀಸರು ಎರಡು ತಿಂಗಳ ಹಿಂದೆ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದರು.