ಮಂಗಳೂರು: ಮಂಗಳೂರಿನಲ್ಲಿ ಹೈಕೋರ್ಟ್ ಪೀಠ ಸ್ಥಾಪಿಸಬೇಕೆಂದು ವಕೀಲರು ಮನವಿ ಮಾಡಿದ್ದಾರೆ.
ಕೈಗಾರಿಕಾ, ಬ್ಯಾಂಕಿಂಗ್, ಶಿಕ್ಷಣ, ವೈದ್ಯಕೀಯ ಕ್ಷೇತ್ರ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿ ಮಂಗಳೂರು ಅಭಿವೃದ್ಧಿ ಹೊಂದಿದೆ. ಹೀಗಾಗಿ ಇಲ್ಲಿನ ಜನರಿಗೆ ತ್ವರಿತ ನ್ಯಾಯ ಸಿಗಬೇಕು. ಈ ನಿಟ್ಟಿನಲ್ಲಿ ಹೈಕೋರ್ಟ್ ಪೀಠ ಸ್ಥಾಪಿಸಬೇಕು ಎಂದು ಮನವಿ ಮಾಡಿದ್ದಾರೆ.
2008ರಲ್ಲಿ ಈ ಬಗ್ಗೆ ಹೋರಾಟ ಆರಂಭವಾಗಿದ್ದು ಇದೀಗ ಈ ಬೇಡಿಕೆ ಮತ್ತಷ್ಟು ಬಲಗೊಂಡಿದೆ. ಮಂಗಳೂರು ವಕೀಲರ ಸಂಘ ಹೈಕೋರ್ಟ್ ಪೀಠ ಚಳವಳಿಯನ್ನು ಪ್ರಧಾನವಾಗಿಟ್ಟುಕೊಂಡು ಎಲ್ಲ ಕಡೆ ಹೈಕೋರ್ಟ್ ಪೀಠ ಸ್ಥಾಪನೆಯ ಘೋಷ ವಾಕ್ಯದೊಂದಿಗೆ ಕಾರ್ಯಕ್ರಮ ಆಯೋಜಿಸುತ್ತಿದೆ. ಈ ನಿಟ್ಟಿನಲ್ಲಿ ತಮ್ಮ ಹಕ್ಕೊತ್ತಾಯ ಮಂಡಿಸುವುದಕ್ಕಾಗಿ ರಾಜ್ಯ ಮಟ್ಟದ ಕ್ರಿಕೆಟ್ ಹಾಗೂ ಥ್ರೋಬಾಲ್ ಪಂದ್ಯ ಆಯೋಜಿಸಲಾಗಿದೆ.
ಮೂರು ದಿನಗಳ ಕಾಲ ನಡೆಯುವ ಈ ಕ್ರೀಡಾಕೂಟದಲ್ಲಿ ರಾಜ್ಯದ ಬೇರೆ ಬೇರೆ ಜಿಲ್ಲೆಗಳ ವಕೀಲರ 36 ತಂಡಗಳು ಭಾಗವಹಿಸಿವೆ. ಈ ಟೂರ್ನಿಯಲ್ಲಿ ಭಾಗವಹಿಸುವ ನ್ಯಾಯಧೀಶರು, ನ್ಯಾಯವಾದಿಗಳು, ಜನಪ್ರತಿನಿಧಿಗಳ ಮುಂದೆ ಹೈಕೋರ್ಟ್ ಪೀಠದ ಹಕ್ಕೊತ್ತಾಯ ಮಾಡಲಾಗುತ್ತಿದೆ ಎಂದು ಮಂಗಳೂರು ವಕೀಲರ ಸಂಘ ಹೇಳಿದೆ.