ರಾಜ್ಯದಲ್ಲಿ ಗೃಹ ಲಕ್ಷ್ಮೀ ಯೋಜನೆಯಡಿ ಮಹಿಳೆಯರು ಪ್ರತಿ ತಿಂಗಳು 2 ಸಾವಿರ ರೂ. ಪಡೆಯುತ್ತಿದ್ದಾರೆ. ಈ ಮಧ್ಯೆ ತೃತೀಯ ಲಿಂಗಿಗಳಿಗೂ ಈ ಯೋಜನೆ ವಿಸ್ತರಿಸಬೇಕೆಂಬ ಕೂಗು ಕೇಳಿ ಬಂದಿತ್ತು. ಈಗ ಸರ್ಕಾರ ಈ ಬೇಡಿಕೆ ಈಡೇರಿಸಿದೆ.
ಸರ್ಕಾರ ಕೂಡ ಆಶ್ವಾಸನೆ ನೀಡಿತ್ತು. ಆದರೆ, ಹಲವು ತೊಡಕು ಅದಕ್ಕೆ ಅಡ್ಡಿಯಾಗಿದ್ದವು. ಆದರೆ, ಈಗ ಸರ್ಕಾರ ಅಸ್ತು ಎಂದಿದ್ದು, ತೃತೀಯ ಲಿಂಗಿಗಳ ಖಾತೆಗೂ ಗೃಹಲಕ್ಷ್ಮಿ ಹಣ ಜಮಾವಣೆ ಮಾಡಲಾಗಿದೆ. ಡಿಬಿಟಿ ಮೂಲಕ ತೃತೀಯ ಲಿಂಗಿಗಳಿಗೆ ಮೊದಲ ಕಂತು ಬಿಡುಗಡೆಯಾಗಿದೆ.
ಲೈಂಗಿಕ ಅಲ್ಪ ಸಂಖ್ಯಾತರು ಗೃಹ ಲಕ್ಷ್ಮೀ ಯೋಜನೆಯ ಮೊದಲ ಕಂತು ಪಡೆದ ಸಂತಸ ವ್ಯಕ್ತಪಡಿಸಿದ್ದಾರೆ. ಈ ಕುರಿತು ತೃತೀಯ ಲಿಂಗಿಗಳ ಸಂಘದ ರಾಜ್ಯ ಸಂಚಾಲಕಿ ಪ್ರಣತಿ ಪ್ರಕಾಶ್ ಮಾತನಾಡಿ, ಸರ್ಕಾರ ನಮಗೂ ಗೌರವ ನೀಡಿದ್ದು ಸಂತಸ ನೀಡಿದೆ. ಹೀಗಾಗಿ ನಮ್ಮ ಸರ್ಕಾರಕ್ಕೆ ಧನ್ಯವಾದ ಅರ್ಪಿಸುತ್ತೇನೆ.
ನಮಗೆ ಈ ತಿಂಗಳಿನಿಂದ ಗೃಹಲಕ್ಷ್ಮಿ ಯೋಜನೆಯ ಎರಡು ಸಾವಿರ ರೂಪಾಯಿ ಹಣ ಬಂದಿದೆ. ಶಕ್ತಿ ಯೋಜನೆಯ ಉಚಿತ ಪ್ರಯಾಣದ ವ್ಯವಸ್ಥೆಯನ್ನೂ ನಮಗೆ ಮಾಡಿಕೊಡಲಾಗಿದೆ ಎಂದು ಹೇಳಿದ್ದಾರೆ.