ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿಗಳಿಗೆ ಜಾಮೀನು ಸಿಕ್ಕಿದೆ. ಹೀಗಾಗಿ ಕೊಲೆಯಾದ ರೇಣುಕಾಸ್ವಾಮಿ ತಂದೆ ಈ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ.
ರೇಣಕಾಸ್ವಾಮಿ ತಂದೆ ಕಾಶೀನಾಥಯ್ಯ ಸುದ್ದಿಗಾರರೊಂದಿಗೆ ಮಾತನಾಡಿ, ಆರೋಪಿಗಳಿಗೆ ಜಾಮೀನು ಸಿಕ್ಕಿರುವುದು ನಮಗೆ ಮಾಧ್ಯಮದ ಮೂಲಕ ತಿಳಿಯಿತು. ಆದರೆ, ನ್ಯಾಯಾಂಗದ ಮೇಲೆ ನಮಗೆ ವಿಶ್ವಾಸವಿದೆ. ತಪ್ಪಿತಸ್ಥರಿಗೆ ಈ ಪ್ರಕರಣದಲ್ಲಿ ಶಿಕ್ಷೆಯಾಗಿ, ನನ್ನ ಮಗನ ಆತ್ಮಕ್ಕೆ ಶಾಂತಿ ಸಿಗಲಿದೆ ಎಂದಿದ್ದಾರೆ.
ತಾತ್ಕಾಲಿಕವಾಗಿ ಆರೋಪಿಗಳಿಗೆ ಜಾಮೀನು ಆಗಿರಬಹುದು. ಆದರೆ ಅಂತಿಮವಾಗಿ ಆರೋಪಿಗಳಿಗೆ ಶಿಕ್ಷೆ ಆಗುವ ನಂಬಿಕೆಯಿದೆ. ಆದರೆ, ಸರ್ಕಾರ ನಮ್ಮ ಸೊಸೆಗೆ ಸಹಾಯ ಮಾಡಬೇಕು. ನಾವು ಮಗನನ್ನು ಕಳೆದುಕೊಂಡ ದುಃಖದಲ್ಲಿದ್ದೇವೆ. ದರ್ಶನ್ ಜೊತೆ ಯಾವುದೇ ಮಾತುಕತೆಗೆ ನಾವು ಸಿದ್ಧರಿಲ್ಲ.
ನಮ್ಮನ್ನು ಯಾರೂ ಇಲ್ಲಿಯವರೆಗೂ ಸಂಪರ್ಕಿಸಿಲ್ಲ. ದರ್ಶನ್ ಜೊತೆ ಮಾತನಾಡಲು ನಾವು ಅಪೇಕ್ಷೆ ಪಟ್ಟಿಲ್ಲ. ಸರ್ಕಾರದ ಮೇಲೆ ಕೂಡ ನಾವು ಒತ್ತಡ ಹಾಕುವುದಿಲ್ಲ ಎಂದಿದ್ದಾರೆ. ಸದ್ಯ ದರ್ಶನ್ ಮತ್ತು ಗ್ಯಾಂಗ್ ಗೆ ಜಾಮೀನು ಸಿಕ್ಕಿದ್ದು, ಸರ್ಕಾರವು ಸುಪ್ರೀಂನಲ್ಲಿ ಪ್ರಶ್ನಿಸುವ ಸಾಧ್ಯತೆ ಇದೆ.