ಹೈದರಾಬಾದ್: ತೆಲುಗು ಸಿನಿ ರಂಗದ ನಟ ಮೋಹನ್ ಬಾಬು ಅವರ ಕುಟುಂಬದ ಜಗಳ ಹಾದಿ -ಬೀದಿ ರಂಪವಾಗಿದೆ. ಅವರು ಹಾಗೂ ಅವರ ಪುತ್ರ ಮಂಚು ಮನೋಜ್ ನಡುವಿನ ಮನಸ್ತಾಪ ಬೀದಿಗೆ ಬಂದಿದೆ. ತಂದೆ- ಮಗ ಮನೆಯ ಎದುರೇ ಜಗಳ ಮಾಡಿಕೊಂಡಿದ್ದು, ಈ ವೇಳೆ ಮಗನ ಮೇಲಿನ ಸಿಟ್ಟನ್ನು ಮೋಹನ್ ಬಾಬು ಪತ್ರಕರ್ತರ ಮೇಲೆ ತೀರಿಸಿಕೊಂಡಿದ್ದಾರೆ.
ವರದಿ ಮಾಡಲು ಬಂದಿದ್ದ ಮಾಧ್ಯಮ ಪ್ರತಿನಿಧಿಗಳ ಮೇಲೆ ನಟ ಮೋಹನ್ ಬಾಬು ಹಾಗೂ ಅವರ ಮನೆಯ ಸೆಕ್ಯುರಿಟಿ ಗಾರ್ಡ್ ಗಳು ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ನಟ ಮಂಚು ಮನೋಜ್ ಅವರು ಹೈದರಾಬಾದ್ ನ ಜಾಲಪಳ್ಳಿಯಲ್ಲಿರುವ ನಟ ಮೋಹನ್ ಬಾಬು ಅವರ ನಿವಾಸಕ್ಕೆ ಬಂದಿದ್ದರು. ಈ ವೇಳೆ ಮಂಚು ಮೋಹನ್ ಅವರು ಸೆಕ್ಯುರಿಟಿ ಗಾರ್ಡ್ ಗಳೊಂದಿಗೆ ವಾಗ್ವಾದಕ್ಕೆ ಇಳಿದಿದ್ದರು. ಆಗ ತಾವೇ ಖುದ್ದಾಗಿ ಮನೆಯ ಗೇಟ್ ತೆರೆದರು.
ಈ ಸಂದರ್ಭದಲ್ಲಿ ಹೊರಗೆ ಬಂದ ಮೋಹನ್ ಬಾಬು ಅವರು, ಮಗನ ಜೊತೆಗೆ ಬೀದಿಯಲ್ಲಿ ನಿಂತು ಜಗಳವಾಡಿದ್ದಾರೆ. ಇದು ಬೀದಿ ರಂಪಾಟವಾಗುತ್ತಿದ್ದಂತೆ ಪೊಲೀಸರು ಹಾಗೂ ಮಾಧ್ಯಮದವರು ಸ್ಥಳಕ್ಕೆ ಬಂದಿದ್ದಾರೆ. ಈ ವೇಳೆ ಮೋಹನ್ ಬಾಬು ಹಲ್ಲೆ ಮಾಡಿದ್ದಾರೆ. ಈ ಜಗಳಕ್ಕೆ ಆಸ್ತಿಯ ವಿವಾದವೇ ಕಾರಣ ಎನ್ನಲಾಗಿದೆ.