ಬೆಂಗಳೂರು: ಸಿಎಂ ಸಿದ್ದರಾಮಯ್ಯ (CM Siddaramaiah) ಅವರು ಮಾಜಿ ಮುಖ್ಯಮಂತ್ರಿ ಎಸ್.ಎಂ ಕೃಷ್ಣ ಅವರ ಅಂತಿಮ ದರ್ಶನ ಪಡೆದಿದ್ದಾರೆ.
ಇಲ್ಲಿನ ಸದಾಶಿವ ನಗರದ ಎಸ್‌ಎಂ ಕೃಷ್ಣ (SM Krishna) ಅವರ ನಿವಾಸಕ್ಕೆ ತೆರಳಿ ದರ್ಶನ ಪಡೆದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಸ್.ಎಂ. ಕೃಷ್ಣ ಅವರು ರಾಜ್ಯ ಹಾಗೂ ದೇಶ ಕಂಡ ಧೀಮಂತ ನಾಯಕರು. ಅವರು ರಾಜಕಾರಣದಲ್ಲಿ ದೀರ್ಘಕಾಲ ತೊಡಗಿಸಿಕೊಂಡಿದ್ದರು. ಬರೋಬ್ಬರಿ 6 ದಶಕಗಳ ಕಾಲ ಸಾರ್ವಜನಿಕರೊಂದಿಗೆ ಇದ್ದವರು.
ವಿಧಾನಸಭೆ, ಪರಿಷತ್, ಲೋಕಸಭೆ, ರಾಜ್ಯಸಭೆಯಲ್ಲಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಐದು ವರ್ಷಗಳ ಕಾಲ ರಾಜ್ಯದ ಸಿಎಂ ಆಗಿದ್ದರು. ಬೆಂಗಳೂರನ್ನು ಸಿಂಗಾಪುರ ಮಾಡಬೇಕೆನ್ನುವ ಕನಸನ್ನು ಕಂಡಿದ್ದರು. ಐಟಿ ಬೆಳವಣಿಗೆ ಅಪಾರವಾದ ಕೊಡಗೆ ನೀಡಿದ್ದಾರೆ. ಇಂದು ಬೆಂಗಳೂರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿದೆ ಎಂದರೆ, ಅದರ ಹಿಂದೆ ಎಸ್.ಎಂ. ಕೃಷ್ಣ ಅವರ ಶ್ರಮವಿದೆ ಎಂದು ಹಾಡಿ ಹೊಗಳಿದ್ದಾರೆ.
ಬರಗಾಲ, ಡಾ.ರಾಜ್ ಕುಮಾರ್ ಕಿಡ್ನಾಪ್, ಕಾವೇರಿ ವಿವಾದ ಹೀಗೆ ಹಲವು ಸಮಸ್ಯೆಗಳನ್ನು ಜಾಣ್ಮೆಯಿಂದ ನಿರ್ವಹಿಸಿದ್ದರು. ಮಹಾರಾಷ್ಟ್ರದ ರಾಜ್ಯಪಾಲರಾಗಿ ಕೆಲಸ ಮಾಡಿದ್ದರು ಎಂದು ನೆನಪು ಮಾಡಿಕೊಂಡಿದ್ದಾರೆ.