ದಕ್ಷಿಣ ಕನ್ನಡ: ಭಾರತೀಯ ಸಂಸ್ಕೃತಿಯಲ್ಲಿ ದೇವರಿಗೆ ಹೆಚ್ಚಿನ ಆದ್ಯತೆ. ದೇವರ ಅಸ್ತಿತ್ವದಿಂದಲೇ ನಾವೆಲ್ಲ ಇರುವುದು ಎಂಬ ನಂಬಿಕೆಯಿದೆ. ಹಿಂದಿನಿಂದಲೂ ದೇವರಿಂದ ಹಲವಾರು ಪವಾಡಗಳನ್ನು ನಡೆದಿರುವುದನ್ನು ನಾವು ಕೇಳಿಯೇ ಇರುತ್ತೇವೆ. ಈಗ ಇಂತಹ ಮಾತೊಂದು ಕೇಳಿ ಬಂದಿದ್ದು, ಜನರು ಆಶ್ಚರ್ಯ ವ್ಯಕ್ತಪಡಿಸುತ್ತಿದ್ದಾರೆ.
ಈ ಘಟನೆ ಪುತ್ತೂರಿನಲ್ಲಿ ವರದಿಯಾಗಿದೆ. ಒಂದು ಶಬ್ದವನ್ನೂ ಉಚ್ಚರಿಸಲು ಬಾರದ ಯುವಕನೊಬ್ಬ ಒಂದು ವರ್ಷದ ಹಿಂದೆ ಶಬರಿಮಲೆ ಏರಿದ್ದ (Lord Ayyappa). ಈ ಬಾರಿ ಶಬರಿಮಲೆಗೆ ಹೋಗಲು ಮಾಲೆ ಹಾಕಿರುವ ಆತನು ಮಾತನಾಡಲು ಆರಂಭಿಸಿದ್ದಾನೆ ಎಂಬ ಸುದ್ದಿ ಹೊರ ಬಿದ್ದಿದೆ.
ಪುತ್ತೂರಿನ ಸಾಮೆತ್ತಡ್ಕದ ಪ್ರಸನ್ನ ಎಂಬ ವ್ಯಕ್ತಿಯೆ ಮಾಲೇ ಧರಿಸಿದ ನಂತರ ಮಾತನಾಡಲು ಆರಂಭಿಸಿದ ವ್ಯಕ್ತಿ ಎನ್ನಲಾಗಿದೆ. ಎರಡನೇ ವರ್ಷದ ಸಿವಿಲ್ ಡಿಪ್ಲೊಮಾ ಓದುತ್ತಿರುವ ಪ್ರಸನ್ನ ವರ್ಷದ ಹಿಂದೆ ಮಾತನಾಡಲು ಸಾಕಷ್ಟ ಕಷ್ಟ ಪಡುತ್ತಿದ್ದ. ಎಲ್ಲವನ್ನೂ ಕೈ ಸನ್ನೆಯ ಮೂಲಕವೇ ಹೇಳುತ್ತಿದ್ದ ಪ್ರಸನ್ನ ಈಗ ಮಾತನಾಡಲು ಆರಂಭಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಪ್ರಸನ್ನನಲ್ಲಾಗಿರುವ ಬದಲಾವಣೆಗೆ ಅಯ್ಯಪ್ಪ ಸ್ವಾಮಿಯ ದಯೆಯೇ ಕಾರಣ ಎನ್ನುವುದು ಹಿರಿಯ ಅಯ್ಯಪ್ಪ ಮಾಲಾಧಾರಿಗಳ ಅಭಿಪ್ರಾಯವಾಗಿದೆ.
ಈ ವ್ಯಕ್ತಿ ಹಿಂದಿನ ವರ್ಷ 48 ದಿನಗಳ ಕಾಲ ಕಠಿಣ ವೃತಾಚರಣೆ ನಡೆಸಿ ಶಬರಿಮಲೆಗೆ ಹೋಗಿದ್ದು, 48 ಮೈಲು ಕಾಡಿನ ದುರ್ಗಮ ರಸ್ತೆಯಲ್ಲಿ ನಡೆದಿದ್ದರು. ಅಂದರೆ, ಇದನ್ನು ಅಯ್ಯಪ್ಪ ಮಾಲಾಧಾರಿಗಳು ದೊಡ್ಡ ಪಾದ ಎನ್ನುತ್ತಾರೆ. ಈ ವರ್ಷವೂ ಭಕ್ತಿಯಿಂದ ಮಾಲೆ ಧರಿಸಿ, ಅಯ್ಯಪ್ಪನ ಸೇವೆ ಆರಂಭಿಸಿದ್ದರು. ಆದರೆ, ಏಕಾಏಕಿ ಮಾತನಾಡುತ್ತಿದ್ದಾರೆ ಎಂದು ಮಾಲಾಧಿಕಾರಿಗಳು ಹೇಳುತ್ತಿದ್ದಾರೆ.
ಪ್ರಸನ್ನ ಮಾತುಗಳು ಸಂಪೂರ್ಣ ಸ್ಪಷ್ಟವಾಗಿಲ್ಲದಿದ್ದರೂ, ಪೋಷಕರು, ಭಕ್ತರಿಗೆ ಅರ್ಥವಾಗುತ್ತಿದೆ ಎನ್ನುತ್ತಿದ್ದಾರೆ. ಈ ವರ್ಷ ಶಬರಿಮಲೆ ಏರಿದರೆ ಪ್ರಸನ್ನ ಇನ್ನಷ್ಟು ಸ್ಪಷ್ಟವಾಗಿ ಮಾತನಾಡುವ ಸಾಧ್ಯತೆಯಿದೆ ಎಂಬ ನಿರೀಕ್ಷೆಯಲ್ಲಿ ಎಲ್ಲರೂ ಇದ್ದಾರೆ. ಈ ವಿಷಯ ಕೇಳಿ ಎಲ್ಲರೂ ಅಯ್ಯಪ್ಪನನ್ನು ಸ್ಮರಿಸುತ್ತಿದ್ದಾರೆ.