ಕರ್ನಾಟಕದ ಮಾಜಿ ಸಿಎಂ, ಮಾಜಿ ವಿದೇಶಾಂಗ ಸಚಿವ ಎಸ್.ಎಂ. ಕೃಷ್ಣ ಅವರು ವಯೋಸಹಯ ಕಾಯಿಲೆಯಿಂದ ನಿಧಾನರಾಗಿದ್ದಾರೆ.
ಎಸ್.ಎಂ. ಕೃಷ್ಣ ಅವರು ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಸೋಮನಹಳ್ಳಿ ಎಂಬಲ್ಲಿ 1932 ರ ಮೇ 1ರಂದು ಜನಿಸಿದ್ದರು. ಅವರ ಪೂರ್ಣ ಹೆಸರು ಸೋಮನಹಳ್ಳಿ ಮಲ್ಲಯ್ಯ ಕೃಷ್ಣ. ಹುಟ್ಟೂರಿನಲ್ಲೇ ಪ್ರಾಥಮಿಕ ಶಿಕ್ಷಣ ಮುಗಿಸಿ, ಮೈಸೂರಿನ ರಾಮಕೃಷ್ಣ ವಿದ್ಯಾಶಾಲೆಯಲ್ಲಿ ಪ್ರೌಢ ಶಿಕ್ಷಣ, ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ತಮ್ಮ ಬ್ಯಾಚುಲರ್ ಆಫ್ ಆರ್ಟ್ಸ್, ಯೂನಿವರ್ಸಿಟಿ ಕಾನೂನು ಕಾಲೇಜಿನಲ್ಲಿ ಕಾನೂನು ಪದವಿ ಪಡೆದಿದ್ದರು. ಅಮೆರಿಕದ ಟೆಕ್ಸಾಸ್‌ನ ಡಲ್ಲಾಸ್‌ನಲ್ಲಿರುವ ಸದರ್ನ್ ಮೆಥೋಡಿಸ್ಟ್ ವಿಶ್ವವಿದ್ಯಾಲಯ ಮತ್ತು ವಾಷಿಂಗ್ಟನ್ ಡಿಸಿಯ ಜಾರ್ಜ್ ವಾಷಿಂಗ್ಟನ್ ವಿಶ್ವವಿದ್ಯಾಲಯದ ಲಾ ಸ್ಕೂಲ್ ನಿಂದಲೂ ಅವರು ಪದವಿ ಪಡೆದಿದ್ದರು.
1962 ರಲ್ಲಿ ಮದ್ದೂರು ವಿಧಾನಸಭಾ ಕ್ಷೇತ್ರದಲ್ಲಿ ಮೊದಲಿಗೆ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿದು, ಮೊದಲ ಪ್ರಯತ್ನದಲ್ಲೇ ಗೆಲುವು ಸಾಧಿಸಿದ್ದರು. ಆನಂತರ ಅವರು ‘ಪ್ರಜಾ ಸೋಷಿಯಲಿಸ್ಟ್ ಪಕ್ಷ ಸೇರಿದ್ದರು. ಆಗ 1967 ರ ಚುನಾವಣೆಯಲ್ಲಿ ಮದ್ದೂರಿನಿಂದ ಕಾಂಗ್ರೆಸ್ ನ ಎಂ.ಎಂ. ಗೌಡ ವಿರುದ್ಧ ಸೋಲು ಕಂಡಿದ್ದರು. 1968 ರಲ್ಲಿ ಹಾಲಿ ಸಂಸದರು ನಿಧನರಾದಾಗ ಅವರು ಮಂಡ್ಯ ಲೋಕಸಭಾ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ಸೋಲಿಸುವ ಮೂಲಕ ರಾಷ್ಟ್ರ ರಾಜಕೀಯಕ್ಕೆ ಎಂಟ್ರಿ ಕೊಟ್ಟಿದ್ದರು.
1968 ರ ಉಪಚುನಾವಣೆಯ ನಂತರ ಮಂಡ್ಯ ಕ್ಷೇತ್ರದಿಂದ ಮೂರು ಬಾರಿ ಸಂಸದರಾಗಿ ಆಯ್ಕೆಯಾಗಿದ್ದರು. 1971 ಮತ್ತು 1980 ರಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಗೆಲುವು ಸಾಧಿಸಿದ್ದರು. ಈ ವೇಳೆ ಕಾಂಗ್ರೆಸ್ ನ ಪ್ರಬಲ ನಾಯಕರಾಗಿ ಬೆಳೆದು ನಿಂತರು. 1999 ರಲ್ಲಿ ಕೆಪಿಸಿಸಿ ಅಧ್ಯಕ್ಷರಾಗಿದ್ದ ಅವರು ಅದೇ ವರ್ಷ ನಡೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಗೆಲುವಿನತ್ತ ಮುನ್ನಡೆಸಿದರು. ಈ ವೇಳೆ ಎಸ್ಎಂ ಕೃಷ್ಣ ನಡೆಸಿದ್ದ ಪಾಂಚಜನ್ಯ ಯಾತ್ರೆ ಕರ್ನಾಟಕ ರಾಜಕಾರಣದಲ್ಲಿ ಕಾಂಗ್ರೆಸ್ಗೆ ಶಕ್ತಿ ತುಂಬಿತ್ತು. ಈ ವೇಳೆ ರಾಜ್ಯದ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿ, ಅಧಿಕಾರ ನಡೆಸಿದರು. ಸಾಕಷ್ಟು ಉತ್ತಮ ಯೋಜನೆಗಳನ್ನು ರಾಜ್ಯಕ್ಕೆ ಕೊಡುಗೆ ನೀಡಿದರು.
2004 ರ ಡಿಸೆಂಬರ್ನಲ್ಲಿ ಮಹಾರಾಷ್ಟ್ರದ ರಾಜ್ಯಪಾಲರಾಗಿ ನೇಮಕಗೊಂಡರು. 2009ರಲ್ಲಿ ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾಗಿ ಮೇ 22ರಂದು ಅಂದಿನ ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಅವರ ಸಂಪುಟದಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವರಾದರು.
ಆದರೆ, ಕೊನೆಗಾಲದಲ್ಲಿ ಅವರು ಬಿಜೆಪಿ ಸೇರಿದರು. 2017 ರ ಮಾರ್ಚ್ನಲ್ಲಿ ಬಿಜೆಪಿಗೆ ಅಧಿಕೃತವಾಗಿ ಸೇರ್ಪಡೆಯಾದರು. ಆದರೆ, 2023ರಿಂದ ರಾಜಕೀಯ ನಿವೃತ್ತಿ ಘೋಷಿಸಿದರು. ಇವರ ಪತ್ನಿಯ ಹೆಸರು ಪ್ರೇಮಾ. ಇವರಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಬೆಂಗಳೂರನ್ನು ಐಟಿ-ಬಿಟಿ ಹಬ್ ಆಗಿ ಮಾಡಲು ಎಸ್.ಎಂ. ಕೃಷ್ಣ ಪಾತ್ರ ಮುಖ್ಯವಾಗಿದೆ. ಭೂ ದಾಖಲೆಗಳ ಡಿಜಿಟಲೀಕರಣ ಮತ್ತು ಇತರ ಅನೇಕ ನಾಗರಿಕ ಸ್ನೇಹಿ ಉಪಕ್ರಮಗಳೊಂದಿಗೆ ವಿದ್ಯುತ್ ಸುಧಾರಣೆಗಳನ್ನು ರಚಿಸುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದರು. ಡಾ. ರಾಜ್ ಕುಮಾರ ಅವರನ್ನು ವೀರಪ್ಪನ್ ನಿಂದ ಬಿಡಿಸಿಕೊಂಡು ಬರುವಲ್ಲಿ ಕೂಡ ಎಸ್ಎಂ ಕೃಷ್ಣ ಪ್ರಮುಖ ಪಾತ್ರ ವಹಿಸಿದ್ದರು.