ಹಾಸನ: ಇತ್ತೀಚೆಗೆ ಹೃದಯಾಘಾತ ಪ್ರಕರಣಗಳು ಹೆಚ್ಚಾಗಿ ಬೆಳಕಿಗೆ ಬರುತ್ತಿದ್ದು, ಹಲವರು ಅಕಾಲಿಕ ಮರಣಕ್ಕೆ ತುತ್ತಾಗುತ್ತಿದ್ದಾರೆ. ಟೆಕ್ಕಿಯೊಬ್ಬರು ಚಿಕ್ಕ ವಯಸ್ಸಿನಲ್ಲೇ ಹೃದಯಾಘಾತಕ್ಕೆ ಬಲಿಯಾಗಿರುವ ಘಟನೆ ನಡೆದಿದೆ.
ಈ ಘಟನೆ ಸಕಲೇಶಪುರ (Sakleshpur) ತಾಲೂಕಿನ ರಾಮೇನಹಳ್ಳಿ ಗ್ರಾಮದಲ್ಲಿ ನಡೆದಿದೆ. ಸಮರ್ಥ್ (26) ಸಾವನ್ನಪ್ಪಿರುವ ಟೆಕ್ಕಿ. ಇವರು ಬೆಂಗಳೂರಿನಲ್ಲಿ ಸಾಫ್ಟ್ ವೇರ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರು. ಆದರೆ, ಇತ್ತೀಚೆಗೆ ವರ್ಕ್ ಫ್ರಂ ಹೋಮ್ ಮಾಡುತ್ತಿದ್ದರು.
ಎಂದಿನಂತೆ ಭಾನುವಾರ ಕೂಡ ರಾತ್ರಿಯಿಂದ ಬೆಳಗ್ಗೆಯವರೆಗೆ ಕೆಲಸ ಮಾಡಿ ಮಲಗಿದ್ದರು. ಆನಂತರ ಸಂಜೆ ಎದ್ದು ನೀರು ಕುಡಿಯುತ್ತಿದ್ದಂತೆ ಮನೆಯಲ್ಲೇ ಕುಸಿದು ಬಿದ್ದಿದ್ದಾರೆ. ಕುಟುಂಬಸ್ಥರು ವೈದ್ಯರಿಗೆ ಕರೆ ಮಾಡಿ ಕರೆಯಿಸಿದ್ದಾರೆ. ಆದರೆ, ವೈದ್ಯರು ಬರುವಷ್ಟರಲ್ಲಿ ಸಮರ್ಥ್ ಸಾವನ್ನಪ್ಪಿದ್ದರು. ವಯಸ್ಸಿಗೆ ಬಂದ ಮಗನನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಸ್ಥಳದಲ್ಲಿ ಮುಗಿಲು ಮುಟ್ಟಿತ್ತು.