ಬೆಳಗಾವಿ: ಸುವರ್ಣಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ (Winter Session) ಉತ್ತರ ಕರ್ನಾಟಕದ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ ಎಂಬ ನಂಬಿಕೆ ಇಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದ್ದಾರೆ.
ರಾಜ್ಯ ಸರ್ಕಾರ ಉತ್ತರ ಕರ್ನಾಟಕ ಸಮಸ್ಯೆಗಳಿಗೆ ಸ್ಪಂದಿಸುತ್ತಿರುವುದು ಕೇವಲ ಬುಟಾಟಿಕೆ. ಈ ಕುರಿತು ಚರ್ಚೆ ಮಾಡುವ ಮನಸ್ಸು ಕಾಂಗ್ರೆಸ್ ಗೆ ಇಲ್ಲ. ರಾಜ್ಯದ ಸರ್ಕಾರವೇ ನಿಷ್ಕ್ರಿಯವಾಗಿದೆ. ಈ ಸರ್ಕಾರ ಸತ್ತು ಹೋಗಿದೆ. ಇದಕ್ಕೆ ಜನರ ನೋವುಗಳಿಗೆ ಸ್ಪಂದಿಸುವ ಆಸಕ್ತಿ ಇಲ್ಲ. ಬರೀ ದುಡ್ಡು ಮಾಡುವುದನ್ನು ಕಾಯಕ ಮಾಡಿಕೊಂಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶಿಶುಗಳ ಮರಣ, ಬಾಣಂತಿಯರ ಸಾವು, ವಕ್ಪ್ ಆಸ್ತಿ ವಿವಾದ ದೊಡ್ಡ ಸದ್ದು ಮಾಡುತ್ತಿದೆ. ಇಷ್ಟಿದ್ದರೂ ಕಾಂಗ್ರೆಸ್ ಬೇಜವಾಬ್ದಾರಿತನದಿಂದ ವರ್ತಿಸುತ್ತಿದೆ. ಅದು ಗ್ಯಾರಂಟಿಗಳಿಂದ ಜನರು ಖುಷಿಯಾಗಿದ್ದಾರೆಂಬ ಭ್ರಮೆಯಲ್ಲಿದೆ. ಸರ್ಕಾರದಲ್ಲಿನ ಸಚಿವರ ಉದ್ಧಟತನ ಮಿತಿಮೀರಿದೆ. ಈ ಸರ್ಕಾರದ ವಿರುದ್ಧ ಸದನಗಳಲ್ಲಿ ನಮ್ಮದೇ ಆದ ಅಸ್ತ್ರಗಳನ್ನು ಪ್ರಯೋಗಿಸುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.