ಗದಗ: ರಕ್ಕಸ ಬೀದಿ ನಾಯಿಗೆ ಮಗು ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ.
ಜಿಲ್ಲೆಯ ಮುಂಡರಗಿ ಪಟ್ಟಣದ ಅಂಬಾಭವನಿ ನಗರದಲ್ಲಿ ನಡೆದಿದೆ. ಘಟನೆಯಲ್ಲಿ 3 ವರ್ಷದ ರುದ್ರಪ್ರಿಯ ದೊಡ್ಡಕಾಶಿ ಎಂಬ ಬಾಲಕನ ಮೇಲೆಯೇ ನಾಯಿ ದಾಳಿ ನಡೆಸಿದ್ದು, ಆತ ಗಂಭೀರವಾಗಿ ಗಾಯಗೊಂಡಿದ್ದಾನೆ. ಬಾಲಕನು ತನ್ನ ಸಂಬಂಧಿಕರ ಮನೆಗೆ ಕುಟುಂಬಸ್ಥರೊಂದಿಗೆ ತೆರಳಿದ್ದ. ಆದರೆ, ಆಟವಾಡಲು ಮನೆಯ ಅಂಗಳಕ್ಕೆ ಬಂದಾಗ ದಾಳಿ ನಡೆಸಿದ ನಾಯಿ, ಎಲ್ಲೆಂದರಲ್ಲಿ ಕಚ್ಚಿದೆ. ಕೂಡಲೇ ಕುಟುಂಬಸ್ಥರು ಓಡಿ ಬಂದು ಮಗುವನ್ನು ರಕ್ಷಿಸಿದ್ದಾರೆ. ಆದರೆ, ಮಗುವಿನ ಸ್ಥಿತಿ ಮಾತ್ರ ಗಂಭೀರವಾಗಿದೆ ಎನ್ನಲಾಗಿದೆ.
ಬಾಲಕ ನರಗುಂದ ಪಟ್ಟಣದ ನಿವಾಸಿ. ಮಗುವಿನ ಮೇಲೆ ನಾಯಿ ದಾಳಿ ನಡೆಸಿದ್ದನ್ನು ಕಂಡು ಸ್ಥಳೀಯರು ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಪುರಸಭೆಯ ಆಡಳಿತ ಮಂಡಳಿಯ ನಿರ್ಲಕ್ಷ್ಯದಿಂದಾಗಿ ಇಂತಹ ಘಟನೆ ನಡೆಯುವಂತಾಗಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.