ನವದೆಹಲಿ: ಹಾವಿನ ದ್ವೇಷ 12 ವರ್ಷ ಎಂದು ನಾವೆಲ್ಲ ಕೇಳುತ್ತಿರುತ್ತೇವೆ. ಈಗ ಇದಕ್ಕೆ ಪುಷ್ಠಿ ಎನ್ನುವಂತೆ ಘಟನೆಯೊಂದು ವರದಿಯಾಗಿದೆ.
ಓರ್ವ ಯುವತಿಯನ್ನು ಹಾವೊಂದು 5 ವರ್ಷಗಳಲ್ಲಿ ಬರೋಬ್ಬರಿ 11 ಬಾರಿ ಕಚ್ಚಿರುವ ವಿಚಿತ್ರ ಘಟನೆ ವರದಿಯಾಗಿದೆ. ಉತ್ತರ ಪ್ರದೇಶದ ಮಹೋಬಾದಲ್ಲಿ ಈ ಘಟನೆ ನಡೆದಿದೆ. 19 ವರ್ಷದ ಯುವತಿಯೊಬ್ಬಳಿಗೆ ಕಳೆದ 5 ವರ್ಷಗಳಿಂದ ಪದೇ ಪದೇ ಕಪ್ಪು ಹಾವು ಕಚ್ಚುತ್ತಿದೆ. ಸದ್ಯ 11ನೇ ಬಾರಿ ಅದೇ ಹಾವು ಕಚ್ಚಿದ್ದರಿಂದಾಗಿ ಯುವತಿಯ ಸ್ಥಿತಿ ಗಂಭೀರವಾಗಿದೆ. ಈ ಹಿನ್ನೆಲೆಯಲ್ಲಿ ಝಾನ್ಸಿ ವೈದ್ಯಕೀಯ ಕಾಲೇಜಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
2019ರಲ್ಲಿ ಯುವತಿ ಗದ್ದೆಯಲ್ಲಿ ಹಾವಿನ ಮೇಲೆ ಆಕಸ್ಮಿಕವಾಗಿ ಕಾಲಿಟ್ಟಾಗ ಅದು ಮೊದಲ ಬಾರಿಗೆ ಕಚ್ಚಿದೆ. ವೈದ್ಯಕೀಯ ಚಿಕಿತ್ಸೆಗೆಂದು ಆಕೆಯನ್ನು ಕರೆದುಕೊಂಡು ಬರುವಾಗಲೂ ಅದು ಹಿಂಬಾಲಿಸಿದೆ. ಅಂದಿನಿಂದ ಇಲ್ಲಿಯವರೆಗೆ ಬರೋಬ್ಬರಿ 11 ಬಾರಿ ಕಚ್ಚಿದೆ. ಯುವತಿ ಸಂಬಂಧಿಕರ ಮನೆಗೆ ಹೋದಾಗಲೂ ಅದು ಹಿಂಬಾಲಿಸಿ ಕಚ್ಚಿದೆ. ಹೀಗಾಗಿ ಕುಟುಂಬಸ್ಥರು ದೇವರ ಮೊರೆ ಹೋದರು ಕೂಡ ಹಾವಿನ ಕಾಟ ತಪ್ಪಿಲ್ಲ ಎನ್ನಲಾಗಿದೆ.