ಚಾಮರಾಜನಗರ: ನಾನು ರಾಜಕೀಯದ ಕೊನೆಗಾಲದಲ್ಲಿದ್ದೇನೆ ಎನ್ನುವ ಮೂಲಕ ಸಿಎಂ ಸಿದ್ದರಾಮಯ್ಯ ಅವರು ಅಚ್ಚರಿಯ ಹೇಳಿಕೆ ನೀಡಿದ್ದಾರೆ.
ಕೊಳ್ಳೇಗಾಲ ತಾಲೂಕಿನ ಸತ್ತೇಗಾಲದಲ್ಲಿನ ಸರ್ಕಾರಿ ಶಾಲಾ ಕಟ್ಟಡ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ನಾನು ರಾಜಕೀಯದ ಕೊನೆಗಾಲದಲ್ಲಿದ್ದೇನೆ. ಜನರ ಪ್ರೀತಿ, ಅಭಿಮಾನ ಗಳಿಸದಿದ್ದರೆ ರಾಜಕೀಯದಲ್ಲಿ ಉಳಿಗಾಲವಿಲ್ಲ. ಹಲವರು ಈ ಜಿಲ್ಲೆಗೆ ಬಂದರೆ ಅಧಿಕಾರ ಉಳಿಯಲ್ಲ ಎಂದು ಬರುತ್ತಿರಲಿಲ್ಲ. ನಾನು 2ನೇ ಬಾರಿ ಮುಖ್ಯಮಂತ್ರಿಯಾಗಿ ಚಾಮರಾಜನಗರಕ್ಕೆ ಬಂದಿದ್ದೇನೆ. ಈ ಮೂಢನಂಬಿಕೆಯನ್ನು ನಾನು ನಂಬಿಲ್ಲ. ಅಧಿಕಾರ ಹೋಗುವುದಕ್ಕೂ ಚಾಮರಾಜನಗರಕ್ಕೂ ಯಾವುದೇ ಸಂಬಂಧ ಇಲ್ಲ. ನನಗೆ ನಿಮ್ಮ ಅಭಿವೃದ್ದಿ ಮಾತ್ರ ಮುಖ್ಯ ಎಂದಿದ್ದಾರೆ.
ನಾನು ಡಿಸಿಎಂ ಆಗಿದ್ದ ವೇಳೆ ಚಾಮರಾಜನಗರವನ್ನು ಜಿಲ್ಲೆ ಎಂದು ಘೋಷಿಸಲಾಗಿತ್ತು. ನಾನು ಸುಮಾರು 20ಕ್ಕೂ ಅಧಿಕ ಬಾರಿ ಈ ಜಿಲ್ಲೆಗೆ ಬಂದಿದ್ದೇನೆ. ಆದರೆ, ನಾನು ಅಧಿಕಾರ ಕಳೆದುಕೊಳ್ಳುವ ಬದಲು ಸಿಎಂ ಆಗಿದ್ದೇನೆ. ನನ್ನ ಕುರ್ಚಿ ಗಟ್ಟಿಯಾಗಿಯೇ ಇದೆ ಎಂದಿದ್ದಾರೆ.