ಚಿಕ್ಕಬಳ್ಳಾಪುರ: ಹೈಕಮಾಂಡ್ ನನಗೆ ಸಚಿವ ಸ್ಥಾನ ಕೊಡಲೇಬೇಕು ಎಂದು ಬಾಗೇಪಲ್ಲಿ ಶಾಸಕ ಎಸ್.ಎನ್. ಸುಬ್ಬಾರೆಡ್ಡಿ ಆಗ್ರಹಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆಶಿ ಅವರ ಸಚಿವ ಸಂಪುಟದಲ್ಲಿ ನನಗೆ ಸ್ಥಾನ ಸಿಗುವ ಸಾಧ್ಯತೆ ಇದೆ. ಅಲ್ಲದೇ, ಸಚಿವ ಸ್ಥಾನ ಕೇಳುವ ಹಕ್ಕು ಕೂಡ ನನಗಿದೆ. ಅಪರೇಷನ್ ಕಮಲದಲ್ಲಿ ಬಿಜೆಪಿಯವರು ನನಗೆ ಸಚಿವ ಸ್ಥಾನದ ಆಫರ್ ಕೊಟ್ಟಿದ್ದರು. ಆದರೆ ನಾನು ಕಾಂಗ್ರೆಸ್ ಪಕ್ಷಕ್ಕೆ ನಿಷ್ಟೆಯಿಂದ ಇದ್ದೇನೆ. ಹೀಗಾಗಿ ನನಗೆ ಸಚಿವ ಸ್ಥಾನ ನೀಡಲೇಬೇಕು ಎಂದಿದ್ದಾರೆ.
ನಾನು ಎರಡು ಬಾರಿ ನಿಗಮ ಮಂಡಳಿ ತಿರಸ್ಕಾರ ಮಾಡಿದ್ದೇನೆ. ಚಿಕ್ಕಬಳ್ಳಾಪುರ, ಶಿಡ್ಲಘಟ್ಟ, ಗೌರಿಬಿದನೂರು, ಚಿಂತಾಮಣಿ ಕ್ಷೇತ್ರದ ಎಲ್ಲರೂ ಸಚಿವರಾಗಿದ್ದಾರೆ. ಬಾಗೇಪಲ್ಲಿ ಕ್ಷೇತ್ರದವರು ಇದುವರೆಗೆ ಸಚಿವರಾಗಿಲ್ಲ. ಹೀಗಾಗಿ ನನಗೆ ಸಚಿವ ಸ್ಥಾನ ನೀಡಬೇಕು ಎಂದಿದ್ದಾರೆ.
ಅಧಿಕಾರ ಹಂಚಿಕೆ ಕುರಿತಂತೆ ಸಿಎಂ ಹಾಗೂ ಡಿಸಿಎಂ ಹೇಳಿಕೆಗಳು ಗೊಂದಲ ಸೃಷ್ಟಿಸುತ್ತಿರುವ ಬೆನ್ನಲ್ಲೇ ಸುಬ್ಬಾರೆಡ್ಡಿ ಅವರ ಮನವಿ ಸಾಕಷ್ಟು ಚರ್ಚೆಗೆ ಕಾರಣವಾಗಿದೆ.