ಬೆಳಗಾವಿ: ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ (BY Vijayendra) ವಿರುದ್ಧ ಮಾಜಿ ಸಚಿವ ರಮೇಶ ಜಾರಕಿಹೊಳಿ ಮತ್ತೊಮ್ಮೆ ಗುಡುಗಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಜಯೇಂದ್ರ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸೂಕ್ತ ವ್ಯಕ್ತಿಯಲ್ಲ. ಹೀಗಾಗಿ ಕೇಂದ್ರದ ಜಂಟಿ ಸಮಿತಿ ಅಧ್ಯಕ್ಷರಿಗೆ ನಮ್ಮ ವರದಿ ಸಲ್ಲಿಸಿದ್ದೇವೆ. ಕೇಂದ್ರದ ವರಿಷ್ಠರಿಗೆ ಎಲ್ಲ ರೀತಿಯಲ್ಲಿ ಮನವರಿಕೆ ಮಾಡಿಕೊಡಲಾಗಿದೆ. ಸದ್ಯದಲ್ಲೇ ನಮ್ಮ ಎರಡನೇ ಹಂತದ ಹೋರಾಟ ನಡೆಯಲಿದೆ ಎಂದಿದ್ದಾರೆ.
ವಿಜಯೇಂದ್ರನಿಗೆ ಇನ್ನೂ ಹುಡುಗಾಟದ ಬುದ್ದಿ ಇದೆ. ರಾಜ್ಯಾದ್ಯಕ್ಷ ಸ್ಥಾನಕ್ಕೆ ವಿಜಯೇಂದ್ರ ಸೂಕ್ತ ವ್ಯಕ್ತಿಯಲ್ಲ. ಹೀಗಾಗಿ ಆತ ತನ್ನ ಸ್ಥಾನ ಬಿಟ್ಟು ಕೊಡಬೇಕು. ಯಡಿಯೂರಪ್ಪ ಸಾಕಷ್ಟು ಹೋರಾಟದ ನಂತರ ಈ ಸ್ಥಾನ ತಲುಪಿದ್ದರು. ಆದರೆ, ಈಗ ಅವರ ಮಗ ಎನ್ನುವ ಕಾರಣಕ್ಕೆ ರಾಜ್ಯಾಧ್ಯಕ್ಷ ಸ್ಥಾನ ನೀಡಲಾಗಿದೆ. ಹೀಗಾಗಿದ್ದಕ್ಕೆ ಯಡಿಯೂರಪ್ಪ ಅವರ ಹೋರಾಟ, ತ್ಯಾಗ ಮಂಕಾಗುತ್ತದೆ ಎಂದು ರಮೇಶ್ ಜಾರಕಿಹೊಳಿ ಹೇಳಿದ್ದಾರೆ.
ಹುಡುಗ ವಿಜಯೇಂದ್ರ ರಾಜ್ಯಾದ್ಯಕ್ಷ ಸ್ಥಾನಕ್ಕೆ ಲಾಯಕ್ ಅಲ್ಲ ಎನ್ನುವುದೇ ನಮ್ಮ ವಾದ. ಹೀಗಾಗಿ ಯತ್ನಾಳ್ ನಡುವಳಿಕೆಯ ಕುರಿತು ತಿಳಿಸುವ ಯತ್ನ ಮಾಡಿದ್ದೇವೆ. ಸದ್ಯಕ್ಕೆ ನಾವು ರಾಜ್ಯಾಧ್ಯಕ್ಷರ ಬದಲಾವಣೆ ಕುರಿತು ಮಾತನಾಡುವುದಿಲ್ಲ. ನಮ್ಮ ಹೋರಾಟ ಮುಂದುವರೆಸುತ್ತೇವೆ ಎಂದಿದ್ದಾರೆ.