ಬ್ರಿಟನ್: ಕರ್ನಾಟಕದಲ್ಲಿ ಕಾಂಗ್ರೆಸ್ ಗೆ ದೊಡ್ಡ ಶಕ್ತಿ ನೀಡಿರುವ ಗ್ಯಾರಂಟಿ ಯೋಜನೆಗಳು ಬ್ರಿಟನ್ ನಲ್ಲೂ ಸದ್ದು ಮಾಡಿವೆ.
ಹೌಸ್ ಆಫ್ ಲಾರ್ಡ್ಸ್ ನಲ್ಲಿ (House of Lords) ನಡೆದ ಇಂಡೋ ಯುರೋಪಿಯನ್ (Indo European) ಹೂಡಿಕೆ ಸಮ್ಮೇಳನದಲ್ಲಿ ಮಾತನಾಡಿರುವ ಕಾರ್ಮಿಕ ಸಚಿವ ಸಂತೋಷ್ ಲಾಡ್ (Santosh Lad), ರಾಜ್ಯದ ಗ್ಯಾರಂಟಿ ಯೋಜನೆಗಳ (Guarantee Scheme) ಕುರಿತು ಬ್ರಿಟನ್ ಸಂಸತ್ ನಲ್ಲಿ (British Parliament) ಪ್ರಸ್ತಾಪ ಮಾಡಿದ್ದಾರೆ.
ಕರ್ನಾಟಕದಲ್ಲಿ ಹಾಗೂ ಬೆಂಗಳೂರಿನಲ್ಲಿ ಹೂಡಿಕೆ ಮಾಡಲು ಮತ್ತು ಉದ್ಯಮ ವಿಸ್ತರಣೆ ಮಾಡಲು ಸಾಕಷ್ಟು ವಿಫುಲ ರೀತಿಯಲ್ಲಿ ನಮ್ಮ ರಾಜ್ಯ ಸರ್ಕಾರ ಹೂಡಿಕೆದಾರರಿಗೆ ನೆರವು ಒದಗಿಸಲಿದೆ. ಕೃಷಿ, ಉದ್ದಿಮೆ ಸೇರಿದಂತೆ ಹಲವು ರಂಗಗಳಲ್ಲಿ ಹೂಡಿಕೆ ಮಾಡಬಹುದು. ಕರ್ನಾಟಕದ ಜಿಡಿಪಿ ದೇಶದಲ್ಲೇ ಮೊದಲ ಸ್ಥಾನದಲ್ಲಿದೆ ಎಂದಿದ್ದಾರೆ.
ಅಲ್ಲದೇ, ಈ ವೇಳೆ ಗ್ಯಾರಂಟಿ ಯೋಜನೆಗಳ ಕುರಿತು ವಿವರಿಸಿದ್ದಾರೆ. ಈ ಕಾರ್ಯಕ್ರಮಗಳನ್ನು ನಮ್ಮ ದೇಶದ ಇನ್ನಿತರ ರಾಜ್ಯಗಳಲ್ಲದೇ, ವಿಶ್ವದ ಹಲವು ದೇಶಗಳಿಗೆ ಸಹ ಮಾದರಿಯಾಗಿ ಪರಿಗಣಿಸಿವೆ. ಈ ಯೋಜನೆಗಳಿಗೆ ಪ್ರತಿ ವರ್ಷ 12 ಬಿಲಿಯನ್ ಡಾಲರ್ ಖರ್ಚು ಮಾಡಲಾಗುತ್ತಿದೆ. ಬಡ ಜನರಿಗೆ ಸಾಮಾಜಿಕ ಸೇವಾ ಯೋಜನೆಗಳನ್ನು ನೀಡಲಾಗುತ್ತಿದೆ. ಇದರಿಂದ ನಮ್ಮ ಕರ್ನಾಟಕ ರಾಜ್ಯದ ಜಿಡಿಪಿ ಸಹ ಗಣನೀಯ ಪ್ರಮಾಣದಲ್ಲಿ ಹೆಚ್ಚಾಗಿದೆ. ಇಂತಹ ಯೋಜನೆಯನ್ನು ಜಾರಿ ಮಾಡಿದ ಸಿಎಂ ಸಿದ್ದರಾಮಯ್ಯ ಅವರಿಗೆ ಧನ್ಯವಾದಗಳು ಎಂದಿದ್ದಾರೆ.
ಬ್ರಿಟನ್ ಮತ್ತು ಭಾರತದ ನಂಟು ತುಂಬ ಹಳೆಯದು. ಹೂಡಿಕೆಗೆ ಎರಡೂ ಸರ್ಕಾರಗಳು ಕೈ ಜೋಡಿಸಿದರೆ ಬಹಳಷ್ಟು ಪ್ರಯೋಜನವಾಗಲಿವೆ. ಹೀಗಾಗಿ ಹೂಡಿಕೆಗೆ ರಾಜ್ಯಕ್ಕೆ ಆದ್ಯತೆ ನೀಡಬೇಕು ಎಂದು ಮನವಿ ಮಾಡಿದ್ದಾರೆ.