ಹಾಸನ: ನಾನು ಎಂದಿಗೂ ಸಂಸದ ಅಥವಾ ಸಾಸಕನಾಗಲು ಹಪಹಪಿಸಿಲ್ಲ ಎಂದು ಜೆಡಿಎಸ್ ನಾಯಕ ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ.
ಮಾಜಿ ಸಚಿವ ಎ.ಮಂಜು ಅವರ ಹುಟ್ಟು ಹಬ್ಬ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಾಧಾರಣ ರೈತ ಕುಟುಂಬದಲ್ಲಿ ಹುಟ್ಟಿದ ದೇವೇಗೌಡ ಅವರನ್ನು ಈ ಜನರು ಪ್ರಧಾನಿ ಮಾಡಿದರು. ನಿಮ್ಮೆಲ್ಲ ಹೃದಯದಲ್ಲಿ ನಮ್ಮ ಕುಟುಂಬದ ಬಗ್ಗೆ ಪ್ರೀತಿ ಇದೆ. ಎಷ್ಟು ಜನ್ಮ ತಾಳಿದರೂ ನಿಮ್ಮ ಋಣ ತೀರಿಸಲು ಆಗುವುದಿಲ್ಲ. ನಮ್ಮ ಕುಟುಂಬದ ಮೇಲೆ ಇಟ್ಟಿರುವ ಪ್ರೀತಿ, ಗೌರವ ಎಷ್ಟು ಜನ್ಮ ಎತ್ತಿ ಬಂದರೂ ತೀರಿಸಲು ಸಾಧ್ಯವಿಲ್ಲ. ನಿಮ್ಮ ಋಣಕ್ಕಾಗಿ ಪ್ರಾಮಾಣಿಕವಾಗಿ ನಮ್ಮ ಇಡೀ ಪಕ್ಷ, ನಮ್ಮ ಕುಟುಂಬ ನಿಮ್ಮ ಜೊತೆಯಲ್ಲಿ ಸದಾಕಾಲ ಇರುತ್ತೇವೆ ಎಂದಿದ್ದಾರೆ.
ನಾನು ರಾಜಕಾರಣದ ಹಿನ್ನೆಲೆಯಲ್ಲಿ ಬಂದ ವ್ಯಕ್ತಿಯಾಗಿದ್ದರೂ ಚಿತ್ರರಂಗದಲ್ಲಿ ಸಾಕಷ್ಟು ಸವಾಲುಗಳನ್ನು ಎದುರಿಸಿದ್ದೇನೆ. ಹಲವು ಚಿತ್ರಗಳನ್ನು ಮಾಡಿದ್ದೇನೆ. ಹೀಗಾಗಿ ಸಾರ್ವಜನಿಕ ಬದುಕಿನಲ್ಲಿ ಜವಾಬ್ದಾರಿಗಳನ್ನು ಅರಿತಿದ್ದೇನೆ. ಆ ಒಂದು ಕಾರಣದಿಂದ ಸಂಪೂರ್ಣವಾಗಿ ಸಾರ್ವಜನಿಕ ಬದುಕಿಗೆ ಧುಮುಕಿದ್ದೇನೆ ಎಂದಿದ್ದಾರೆ.
ದೇವೇಗೌಡರಿಗೆ 92 ವಯಸ್ಸಾದರೂ ರಾಜ್ಯಸಭೆಯಲ್ಲಿ ಏಕಾಂಗಿಯಾಗಿ ನೆಲ, ಜಲ, ಭಾಷೆ ಉಳಿಸುವ ಕೆಲಸ ಮಾಡುತ್ತಿದ್ದಾರೆ. ನನ್ನ ಜೀವನದ ಸ್ಪೂರ್ತಿ ದೇವೇಗೌಡರು. ನನ್ನ ಜವಾಬ್ದಾರಿಯನ್ನು ಅರಿತಿದ್ದೇನೆ. ಅನಿರೀಕ್ಷಿತವಾದ ಬೆಳವಣಿಗೆಯಿಂದ ಉಪಚುನಾವಣೆಯಲ್ಲಿ ಸ್ಪರ್ಧಿಸಬೇಕಾಗಿ ಬಂದಿದೆ. ಲಕ್ಷಾಂತರ ಕಾರ್ಯಕರ್ತರ ದುಡಿಮೆ, ಎಲ್ಲಾ ತಂದೆ, ತಾಯಿಯರ ಆಶೀರ್ವಾದ, ರೈತರ ಆಶೀರ್ವಾದ ಮಾಡಿ ಇಲ್ಲಿಯವರೆಗೆ ಬೆಳೆಸಿ, ಉಳಿಸಿದ್ದೀರಿ. ಮುಂದೆಯೂ ನಿಮ್ಮ ಸೇವೆ ಮಾಡುತ್ತೇನೆ ಎಂದಿದ್ದಾರೆ.