ಬೆಂಗಳೂರು: ಸಿಎಂ ಸಿದ್ದರಾಮಯ್ಯ ಅವರ ಬಲ ತಂಬುವುದಕ್ಕಾಗಿ ಕಾಂಗ್ರೆಸ್ ನ ಕೆಲವು ಸಚಿವರು, ಶಾಸಕರು, ಮುಖಂಡರು ಹಾಗೂ ಕಾರ್ಯಕರ್ತರು ಸಮಾವೇಶ ನಡೆಸಲು ಮುಂದಾಗಿದ್ದಾರೆ. ಅದರಲ್ಲೂ ಜೆಡಿಎಸ್ ಭದ್ರಕೋಟೆಯಲ್ಲಿ ಕಾರ್ಯಕ್ರಮ ಆಯೋಜಿಸಿ, ದೇವೇಗೌಡರ ಕುಟುಂಬಕ್ಕೆ ಠಕ್ಕರ್ ಕೊಡಲು ಮುಂದಾಗಿದ್ದಾರೆ. ಆದರೆ, ಈ ಕಾರ್ಯಕ್ರಮಕ್ಕೆ ಈಗ ಜೆಡಿಎಸ್ ತಿರುಗೇಟು ನೀಡಿದೆ.
ಡಿ. 5ಕ್ಕೆ ಬೃಹತ್ ಸಮಾವೇಶ ಆಯೋಜಿಸಲು ಈಗಾಗಲೇ ಸಿಎಂ ಸಿದ್ದರಾಮಯ್ಯ ಆಪ್ತರು ತಯಾರಿ ನಡೆಸಿದ್ದಾರೆ. ಈ ಮಧ್ಯೆ ಜೆಡಿಎಸ್ ವ್ಯಂಗ್ಯವಾಡಿದೆ.
ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ ಜೆಡಿಎಸ್, ಜೆಡಿಎಸ್ ಬಿಡುವಾಗ ಆಡಿದ್ದ ಸದಾರಮೆ ಆಟವನ್ನೇ ಕಾಂಗ್ರೆಸ್ ಬಿಡುವ ಮುನ್ನ @siddaramaiah ಶುರು ಮಾಡಿಕೊಂಡಿದ್ದಾರೆ. ಹಾಸನದಲ್ಲಿ ಡಿಸೆಂಬರ್ 5ನೇ ತಾರೀಖು ನಡೆಯುತ್ತಿರುವ ಕಾಂಗ್ರೆಸ್ಸಿನ ಅಡ್ರೆಸ್ಸೆ ಇಲದ ಅಹಿಂದಾ ಸಮಾವೇಶ ಅವರ ಹೊಸ ಗಂಜಿ ಕೇಂದ್ರದತ್ತ ಪಯಣದ ಸಂಕೇತವಾ? ಅಥವಾ ಸಿದ್ದರಾಮಯ್ಯಗೆ ಕಾಂಗ್ರೆಸ್ಸಿಗರೇ ಪ್ಲ್ಯಾನ್ ಮಾಡಿರುವ ಬೀಳ್ಕೊಡುಗೆ ಸಮಾರಂಭವಾ?”
ಮನೆಯೊಂದು ಮೂವತ್ತೊಂದು ಬಾಗಿಲು ಎನ್ನುವಂತೆ ಆಗಿರುವ @INCKarnataka ಸರಕಾರದಲ್ಲಿ ಸಿಎಂ ಸಾಹೇಬರಿಗೆ ಸ್ವಯಂ ನಿವೃತ್ತಿ ಕೊಡಿಸಲು ಕೈ ಹೈಕಮಾಂಡ್ ತೆರೆಮರೆಯಲ್ಲಿ ಕಸರತ್ತು ನಡೆಸುತ್ತಿರುವ ಸೂಚನೆಯೇ ಇದು? ” ಎಂದು ಜೆಡಿಎಸ್ ಹೇಳಿದೆ,
ರಾಜ್ಯದಲ್ಲಿ ಈ ಸರಕಾರ ಬಂದಾಗಿನಿಂದಲೂ ಅನೇಕ ಹಗರಣಗಳಿಂದ ದೇಶವ್ಯಾಪಿ @INCIndia ಮುಜುಗರಕ್ಕೀಡಾಗುತ್ತಲೇ ಇದೆ. ಆ ಮುಜುಗರದಲ್ಲಿ ಸಿದ್ದು ಸರಕಾರದ್ದು ಸಿಂಹಪಾಲು. ವಾಲ್ಮೀಕಿ ನಿಗಮ, ಮುಡಾ, ಪರಿಶಿಷ್ಟರ ಮೀಸಲು ಹಣ ಲೂಟಿ, ಅಬಕಾರಿ ಹಗರಣ ಸೇರಿ ಲಂಚಾವತಾರದಲ್ಲಿ ದಾಖಲೆ ಬರೆದಿರುವ ಸರಕಾರದಲ್ಲಿ, ದಿನಕ್ಕೊಂದರ ಲೆಕ್ಕದಲ್ಲಿ ಹೊರ ಬರುತ್ತಿರುವ ಹಗರಣಗಳು ಕೈ ಕಮಾಂಡ್ ನಾಯಕರನ್ನೂ ಹೈರಾಣ ಮಾಡಿವೆ. ಹಸ್ತಿನಾವತಿಯಲ್ಲೂ ಇವರ ಮಾನ ಹಾದಿ ಬೀದಿಯಲ್ಲಿ ಹರಾಜಾಗುತ್ತಿದೆ”. 50:50 ಅನುಪಾತದ ಲೆಕ್ಕದಲ್ಲಿ ನಡೆದ ಅಧಿಕಾರ ಸೂತ್ರ ಬಿಗಡಾಯಿಸಿದ್ದು, ಕುರ್ಚಿ ಆಕಾಂಕ್ಷಿಗಳು ದೆಹಲಿ ಯಾತ್ರೆ ಜೊತೆಗೆ ಗುಪ್ತ್ ಗುಪ್ತ್ ಸಭೆಗಳನ್ನು ನಡೆಸುತ್ತಿದ್ದಾರೆ ” ಎಂದು ಜೆಡಿಎಸ್ ಪ್ರಶ್ನೆ ಮಾಡಿದೆ.