ಬೆಂಗಳೂರು: ನಗರದ ಜನರಿಗೆ ಮತ್ತೆ ಚಿರತೆಯ ಭಯ ಶುರುವಾಗಿದೆ.
ನಗರದ ಹೊರವಲಯಗಳಲ್ಲಿ ಚಿರತೆ (Leopard)ಗಳ ಹಾವಳಿ ಹೆಚ್ಚಾಗಿದ್ದು, ಜನರು ಸಂಚರಿಸಲು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಬನ್ನೇರುಘಟ್ಟ (Bannerghatta National Park) ವ್ಯಾಪ್ತಿಯಲ್ಲಿ ಕೂಡ ಚಿರತೆ ಸವಾರರಿಗೆ ದರ್ಶನ ನೀಡಿದ್ದು, ಜನರು ಕೈಯಲ್ಲಿ ಜೀವ ಹಿಡಿದು ಜೀವನ ಸಾಗಿಸುವಂತಾಗಿದೆ.
ಆನೇಕಲ್ (Anekal) ತಾಲೂಕಿನ ಜಿಗಣಿ ಹತ್ತಿರದ ನಿಸರ್ಗ ಬಡಾವಣೆ ಹಾಗೂ ಲೋಟಸ್ ಬಡಾವಣೆ ಸುತ್ತಮುತ್ತ ಚಿರತೆ ಓಡಾಡುತ್ತಿದ್ದು ಚಿರತೆ ಓಡಾಟದ ದೃಶ್ಯಳು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸ್ಥಳೀಯರು ಅರಣ್ಯ ಇಲಾಖೆಗೆ ಈ ಕುರಿತು ಮಾಹಿತಿ ನೀಡಿದ್ದು, ಅರಣ್ಯ ಇಲಾಖೆ ಸಿಬ್ಬಂದಿ ಬೋನ್ ಇಟ್ಟು ಚಿರತೆಗಳಿಗೆ ಹುಡುಕಾಟ ನಡೆಸಿದೆ. ಅಲ್ಲದೇ, ನಿಸರ್ಗ ಬಡಾವಣೆ ಸೇರಿದಂತೆ ಸುತ್ತಮುತ್ತಲಿನ ಬಡಾವಣೆ ನಿವಾಸಿಗಳು ರಾತ್ರಿ ಸಮಯದಲ್ಲಿ ಒಬ್ಬರೇ ಓಡಾಡಬಾರದು ಎಂದು ಅರಣ್ಯ ಇಲಾಖೆ ಎಚ್ಚರಿಕೆ ನೀಡಿದೆ.