ಬೆಂಗಳೂರು: ಭೋವಿ ಅಭಿವೃದ್ಧಿ ನಿಗಮ ಅವ್ಯವಹಾರ ಪ್ರಕರಣದಲ್ಲಿ ತನಿಖೆ ಎದುರಿಸುತ್ತಿದ್ದ ಜೀವಾ ಎಂಬ ವಕೀಲ ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಿದ್ದ ಡಿವೈಎಸ್ಪಿ ಕನಕಲಕ್ಷ್ಮೀ ಅವರನ್ನು ಬಂಧಿಸಬೇಕು ಎಂದು ರಾಜ್ಯ ವಕೀಲರ ಸಂಘದ ಅಧ್ಯಕ್ಷ ವಿವೇಕ್ ಸುಬ್ಬಾರೆಡ್ಡಿ ಆಗ್ರಹಿಸಿದ್ದಾರೆ.
ಈ ಕುರಿತು ಮಾತನಾಡಿದ ಅವರು, ಜೀವಾ ಆತ್ಮಹತ್ಯೆ ಪ್ರಕರಣವನ್ನು ಸಿಬಿಐಗೆ ವಹಿಸಬೇಕೆಂದು ಹೈಕೋರ್ಟ್ನಲ್ಲಿ ಶನಿವಾರ ಅರ್ಜಿ ಹಾಕಿದ್ದೇವೆ. ಆಯುಕ್ತರು ಈ ಪ್ರಕರಣದ ತನಿಖೆ ನಡೆಸಲು ಸಿಸಿಬಿಗೆ ವಹಿಸಿದ್ದಾರೆ. ಸಿಸಿಬಿ ಯಾವುದೇ ತನಿಖೆ ಮಾಡದೇ ಸುಮ್ಮನಿದ್ದಾರೆ. ಉನ್ನತ ಮಟ್ಟದ ಅಧಿಕಾರಿಗಳ ಮೇಲೆ ಕ್ರಮಕ್ಕೆ ಹೆದರುತ್ತಿದ್ದಾರೆ. ಹೀಗಾಗಿ ಈ ಪ್ರಕರಣವನ್ನು ಸಿಸಿಬಿಗೆ ಕೊಡಲೇಬೇಕು ಎಂದು ಆಗ್ರಹಿಸಿದ್ದಾರೆ.
ಜೀವಾಳಿಗೆ ಡಿವೈಎಸ್ಪಿ ಕನಕಲಕ್ಷ್ಮೀ ಸಾಕಷ್ಟು ಟಾರ್ಚರ್ ನೀಡಿರುವ ಆರೋಪ ಇದೆ. ಜೀವಾಳ ಬಟ್ಟೆ ಬಿಚ್ಚಿ ಹಲ್ಲೆ ಮಾಡಲಾಗಿದೆ. ಜೀವಾ ಬರೆದಿರುವ 13 ಪುಟಗಳ ಡೆತ್ನೋಟ್ನಲ್ಲಿ ಕನಕಲಕ್ಷ್ಮೀ ಹೆಸರನ್ನು ಸ್ಪಷ್ಟವಾಗಿ ಹೇಳಿದ್ದಾರೆ. ಕನಕಲಕ್ಷ್ಮೀ ಈ ಹಿಂದೆ ತುಮಕೂರಿನಲ್ಲಿ ಇದ್ದಾಗಲೂ ಹಲ್ಲೆಯ ಆರೋಪ ಹೊಂದಿದ್ದರು. ಹೀಗಾಗಿ ಕೂಡಲೇ ಅವರನ್ನು ಬಂಧಿಸಬೇಕು ಎಂದು ಆಗ್ರಹಿಸಿದ್ದಾರೆ.